ಬಳ್ಳಾರಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲೆಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಆನ್‌ಲೈನ್ ಪಾಠ ಬೋಧನೆ ಮೊರೆ ಹೋಗಿದೆ.
ಕಳೆದೆರಡು ದಿನಗಳಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿರುವ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಮೇ ತಿಂಗಳಾಂತ್ಯಕ್ಕೆ ಬೋಧನಾಭ್ಯಾಸ ಮುಗಿದು ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯಬೇಕಿತ್ತು. ಆದರೆ, ಕೊರೊನಾದಿಂದ ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ. ಅಲ್ಲದೆ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಣೆಯಾದ ಹಿನ್ನೆಲೆ ಝೂಮ್ ಆ್ಯಪ್ ಮೂಲಕ ಪಾಠ ಪ್ರಾರಂಭಿಸಲಾಗಿದೆ.
ಇದರಲ್ಲಿ ಒಂದೇ ಬಾರಿಗೆ 24-100 ವಿದ್ಯಾರ್ಥಿಗಳು ಆನ್‌ಲೈನ್‌ಗೆ ಬರಬಹುದು. ಇದರ ಜತೆಗೆ ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ಕ್ಲಾಸ್‌ರೂಮ್, ಲೂಮ್ ಸಾಫ್ಟ್‌ವೇರ್ ತಂತ್ರಜ್ಞಾನಗಳನ್ನು ಬೋಧನೆಗೆ ಬಳಸಲಾಗುತ್ತಿದೆ. ಈ ಮುಂಚೆ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್, ಟೆಲಿಗ್ರಾಮ್ ಗ್ರೂಪ್‌ಗಳ ಮೂಲಕ ಪಿಡಿಎಫ್ ನೋಟ್ಸ್, ಆಡಿಯೋ ತುಣುಕುಗಳ ಮೂಲಕ ಬೋಧನೆ ಮಾಡಲಾಗುತ್ತಿತ್ತು. ಆದರೆ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಸಂಶೋಧನಾ ಚಟುವಟಿಕೆ, ಆನ್‌ಲೈನ್ ಪಠ್ಯಗಳಿಗೆ ಆದ್ಯತೆ ನೀಡಬೇಕೆಂದು ಆದೇಶ ಹೊರಡಿಸಿದ್ದರಿಂದ ವಿವಿ ಈ ಕ್ರಮಕೈಗೊಂಡಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ: ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆನ್‌ಲೈನ್ ಮೂಲಕ ಪಾಠ ಮಾಡುವಾಗ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಸೇರಿ ನಾನಾ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ. ಇದರಿಂದ ಆನ್‌ಲೈನ್ ಮೂಲಕ ಸರಿಯಾಗಿ ಅಭ್ಯಸಿಸಲು ಆಗುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು. ಅಲ್ಲದೆ ಉಪನ್ಯಾಸಕರು ಆನ್‌ಲೈನ್ ಮೂಲಕ ಶಿಕ್ಷಣ ಪ್ರಾರಂಭಿಸಿದಾಗಲೂ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸುವುದು ಕಷ್ಟ ಸಾಧ್ಯವಾಗಿದೆ. ಕ್ಲಾಸ್‌ರೂಮ್‌ನಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರಿಕೃತಗೊಳಿಸಿ ಸಮಚಿತ್ತದಿಂದ ಪಾಠ ಮಾಡಬಹುದು. ಆದರೆ, ಆನ್‌ಲೈನ್‌ನಲ್ಲಿ ಪರಿಣಾಮಕಾರಿಯಾಗಿ ಪಾಠ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ ಉಪನ್ಯಾಸಕರು.
ತಂತ್ರಜ್ಞಾನಗಳು ಶಿಕ್ಷಣದ ಗುಣಮಟ್ಟ ಹೆಚ್ಚು ಮಾಡುತ್ತವೆ. ತಂತ್ರಜ್ಞಾನ ಆಧಾರಿತ ಕಲಿಕೆ ಪ್ರಸ್ತುತ ವಿದ್ಯಮಾನಗಳಲ್ಲಿ ಅನಿವಾರ್ಯ. ಉನ್ನತ ಶಿಕ್ಷಣದ ಆಶಯದಂತೆ ಆನ್‌ಲೈನ್ ಕಲಿಕೆಯನ್ನು ಮುಂಬರುವ ದಿನಗಳಲ್ಲಿ ವಿವಿಯಲ್ಲಿ ಕಡ್ಡಾಯ ಗೊಳಿಸುವ ಚಿಂತನೆ ನಡೆದಿದೆ. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲೆಂದು ಆನ್‌ಲೈನ್ ಮೂಲಕ ಪಾಠ ಹೇಳುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆಂದು ಕುಲಪತಿ ಪ್ರೊ. ಸಿದ್ದು ಪಿ ಅಲಗೂರ ತಿಳಿಸಿದ್ದಾರೆ.