ಬಳ್ಳಾರಿ: ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಜಾಮೀನು ಪಡೆದು ತವರೂರಾದ ಹೊಸಪೇಟೆಗೆ ಆಗಮಿಸಿದ್ದು, ಹೊಸಪೇಟೆ ನಗರದ ದೇಗುಲದಲ್ಲಿಂದು ಶಾಸಕ ಆನಂದ್ ಸಿಂಗ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಹೊಸಪೇಟೆ ಪಟೇಲ್ ನಗರದ ಕೃಷ್ಣಾ ಮಂದಿರದಲ್ಲಿದ್ದ ಶಾಸಕ ಆನಂದ್ ಸಿಂಗ್ ಅವರನ್ನ ಭೇಟಿಯಾದ ಶಾಸಕ ಗಣೇಶ, ಕಾಲಿಗೆ ಎರಗಿ ಕ್ಷಮೆಯಾಚಿಸಿದ್ದಾರೆಂದು ಶಾಸಕರಿಬ್ಬರ ಆಪ್ತ ವಲಯಗಳು ತಿಳಿಸಿವೆ. ತಮ್ಮ ಕಾರು ಚಾಲಕರೊಂದಿಗೆ ಶಾಸಕ ಗಣೇಶ ಅವರು ಈ ದಿನ ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದರು. ದೇಗುಲದ ನಿರ್ಜನ ಪ್ರದೇಶದಲ್ಲಿ ಕುಳಿತಿದ್ದ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿಯಾದರು. ಬಳಿಕ, ಆನಂದ್ ಸಿಂಗ್ ಅವರ ಕಾಲಿಗೆ ಎರಗಿದ ಗಣೇಶ, ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಎನ್.ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಸಂಸದ ಉಗ್ರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ಸಂಧಾನದ ಮಾತುಕತೆ ಮೂಲಕ ಅವರಿಬ್ಬರ ನಡುವಿನ ವೈಮನಸ್ಸನ್ನ ಬಗೆಹರಿಸುವುದಾಗಿ ಹೇಳಿದ್ದರು. ಅದಕ್ಕೆ ಪುಷ್ಠಿ ನೀಡಿರುವಂತೆ ಈಗ ಶಾಸಕರಾದ ಗಣೇಶ ಹಾಗೂ ಆನಂದ್ ಸಿಂಗ್ ಅವರ ಭೇಟಿ ಬಗ್ಗೆ ಸುದ್ದಿ ಹಬ್ಬಿದೆ.