ಬಳ್ಳಾರಿ : ನೂತನ ವಿಜಯನಗರ ಜಿಲ್ಲೆ ರಚನೆಯಿಂದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮತ್ತು ರೆಡ್ಡಿ ಸಹೋದರರಲ್ಲಿ ಬಿರುಕು ಉಂಟಾಗಿರೋದು ಇದೀಗ ಬಹಿರಂಗಗೊಂಡಿದೆ.
ನೂತನ ವಿಜಯನಗರ ಜಿಲ್ಲೆ ಘೋಷಣೆಗೆ ಬಿಜೆಪಿಯ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ತಮ್ಮ ಅಸಮಾಧಾನವನ್ನು ಮಾಧ್ಯಮದ ಎದುರು ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ನೂತನ ವಿಜಯ ನಗರ ಜಿಲ್ಲೆ ಘೋಷಣೆಗೆ ಬೆಂಬಲ ಸೂಚಿಸಿದ್ದಾರೆ. ಮೊದಲಿಂದಲೂ ಉಭಯ ಮುಖಂಡರು ನೂತನ ವಿಜಯನಗರ ಜಿಲ್ಲೆ ರಚನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಆದರೀಗ ಸಚಿವ ಶ್ರೀರಾಮುಲು ಮಾತ್ರ ದಿಢೀರನೆ ತಮ್ಮ ವರಸೆ ಬದಲಿಸಿದ್ದಾರೆ. ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಮಾತ್ರ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾದ ಸಚಿವ ಶ್ರೀರಾಮುಲು ಅವರು ತಮ್ಮ ಬೆಂಗಾವಲಾಗಿ ಇರುತ್ತಾರೆ ಎಂಬ ಧೈರ್ಯವೇ ಅವರನ್ನು ಮುಂದುವರಿಯುವಂತೆ ಮಾಡಿತ್ತು.
ಆದರೆ, ಸಚಿವ ಶ್ರೀರಾಮುಲು ದಿಢೀರನೆ ಹಿಂದೆ ಸರಿದಿರೋದು ಕೂಡ ಗಾಲಿ ಸೋಮಶೇಖರರೆಡ್ಡಿ ಅವರಿಗೆ ಕೊಂಚಮಟ್ಟಿಗೆ ಹಿನ್ನಡೆಯಾಗಿದೆ. ಹೀಗಾಗಿ, ಸಚಿವ ಶ್ರೀರಾಮುಲು-ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ನಡುವೆ ಉಂಟಾದ ಬಿರುಕಿಗೆ ಈ ನೂತನ ವಿಜಯನಗರ ಜಿಲ್ಲೆ ಘೋಷಣೆಯೇ ಕಾರಣವಾಯಿತೆಂದು ಹೇಳಲಾಗುತ್ತಿದೆ. ಈ ಹಿಂದೆಯೇ ನೂತನ ಜಿಲ್ಲೆ ರಚನೆಯನ್ನು ಸಚಿವ ಶ್ರೀರಾಮುಲು ವಿರೋಧಿಸಿದ್ದರು. ಬದಲಾದ ಸನ್ನಿವೇಶದಲ್ಲಿ ನೂತನ ವಿಜಯನಗರ ಜಿಲ್ಲೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಚಿವ ಶ್ರೀರಾಮುಲು ಒಳ ಒಪ್ಪಂದಕ್ಕೆ ರೆಡ್ಡಿ ವಿರೋಧ?: ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಚಿವರಾದ ಆನಂದಸಿಂಗ್ ಹಾಗೂ ಶ್ರೀರಾಮುಲು ಒಳ ಒಪ್ಪಂದ ಮಾಡಿಕೊಂಡಿದ್ದಾರಾ ಎಂಬ ಸಂಶಯ ಮೂಡಿದೆ. ಇದೀಗ ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರೆಡ್ಡಿ ಅವರು ಮೊಳಕಾಲ್ಮೂರು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರೆಡ್ಡಿ ಸಹೋದರರ ಅತ್ಯಾಪ್ತ ಬಳಗದ ಸಚಿವ ಶ್ರೀರಾಮುಲು ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಲು ಪ್ಲಾನ್ ಮಾಡಿದ್ದು, ಆದರೀಗ ಯಾವುದೇ ಕಾರಣಕ್ಕೂ ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಬಾರದೆಂದು ಆಗ್ರಹಿಸಿದ್ದಾರೆ.
ಅಣ್ಣ- ತಮ್ಮಂದಿರಂತಿದ್ದ ರೆಡ್ಡಿ ಬ್ರದರ್ಸ್ : ಈ ಹಿಂದೆ ಅಣ್ಣ-ತಮ್ಮಂದಿರಂತೆ ಇದ್ದ ಸಚಿವ ಶ್ರೀ ರಾಮುಲು-ರೆಡ್ಡಿ ಬ್ರದರ್ಸ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾತಿನ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮೊಳಕಾಲ್ಮೂರನ್ನು ಬಳ್ಳಾರಿಗೆ ಸೇರಿಸಬಾರದು. 371ಜೆ ಪ್ರಕಾರ ಇಲ್ಲಿನ ಜನರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ.
ಈಗ ಮೊಳಕಾಲ್ಮೂರು ಸೇರಿಸಿ ಅಂತಾರೆ, ಮುಂದೆ ಚೆಳ್ಳಕೆರೆ ಸೇರಿಸಿ ಅಂತಾರೆ. ಆಗ ಏನ್ ಮಾಡೋದು, ಮುಂದೆ ರಾಜ್ಯದ ಎಲ್ಲಾ ಜಿಲ್ಲೆಯನ್ನು ಸೇರಿಸಿ ಅಂತಾರೆ. ಆಗ ಏನ್ ಮಾಡೋದೆಂದು ಸಚಿವ ಶ್ರೀರಾಮುಲು ಅವರ ಹೇಳಿಕೆಗೆ ಶಾಸಕ ಸೋಮ ಶೇಖರರೆಡ್ಡಿ ತೀರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.