ಬಳ್ಳಾರಿ: ನಿನ್ನೆಯ ದಿನ ನಾನೊಂದು ಹೇಳಿಕೆ ಕೊಟ್ಟರೆ ಅದನ್ನ ಏನೇನೋ ಹೇಳಿ ಸುದ್ದಿ ಬಿತ್ತರ ಮಾಡಿದ್ರೆ, ಅದ್ಕೆ ನಾನೇನು ಪ್ರತಿಕ್ರಿಯಿಸಲಾರೆ. ಇನ್ಮುಂದೆ ನಾನು ಯಾವುದಕ್ಕೂ ಪ್ರತಿಕ್ರಿಯಿಸದಿರಲು ನಿರ್ಧರಿಸುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ ಆಯೋಜಿಸಿದ್ದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನಾನೊಂದು ಹೇಳಿಕೆ ನೀಡಿದ್ರೆ. ಅದ್ಕೆ ಬೇರೊಂದು ಬಣ್ಣ ಹಚ್ಚಿ ಸುದ್ದಿ ಬಿತ್ತರಿಸಿರೋದಕ್ಕೆ ನನ್ನ ವಿರೋಧವಿದೆ. ನಾನೀಗ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿರುವೆ ಎಂದರು.
ಪ್ರತಿಪಕ್ಷಗಳಿಗೆ ಪುಕ್ಕಟೆ ಪ್ರಚಾರ ಬೇಕಿದೆ : ಪ್ರತಿಪಕ್ಷಗಳಿಗೆ ಪುಕ್ಕಟೆ ಪ್ರಚಾರದ ಅನಿವಾರ್ಯತೆ ಇದೆ. ಹೀಗಾಗಿ ಕೋವಿಡ್-19 ವಿಚಾರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಕೋವಿಡ್-19 ವಿಚಾರವಾಗಿ ಯಾವುದೇ ಗೋಲ್‌ಮಾಲ್ ಮಾಡೋಕಾಗಲ್ಲ. ಅವರಿಗೆ ಒಂದ್ ರೀತಿಯ ಪುಕ್ಕಟೆ ಪ್ರಚಾರ ಬೇಕಾಗಿದೆ. ನಮ್ಮ ಸಚಿವರು ಟೊಂಕಕಟ್ಟಿ ದುಡಿಯುತ್ತಿದ್ದಾರೆ. ಅದನ್ನು ಲೆಕ್ಕಿಸದೇ ಇಂತಹ ಟೀಕೆ- ಟಿಪ್ಪಣಿ ಮಾಡೋದು ಎಷ್ಟು ಸರಿ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ರು.
ಪ್ಲಾಸ್ಮಾ ಥೆರಪಿ ಅತ್ಯಗತ್ಯ : ಕೋವಿಡ್-19 ವೈರಾಣುವಿನಿಂದ ಗುಣಮುಖರಾದವರಿಗೆ ಪ್ಲಾಸ್ಮಾ ಥೆರಪಿಯು ಅತ್ಯಗತ್ಯ. ಹೀಗಾಗಿ, ಇಡೀ ದೇಶವೇ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದೆ. ನಮ್ಮ ರಾಜ್ಯದಲ್ಲೂ ಕೂಡ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಕೇವಲ 20 ಮಂದಿ ಮುಂದೆ ಬಂದಿದ್ದಾರೆ ಎಂದರು.
ಸಂಬಂಧವೇ ಇಲ್ಲದ ವಿಷಯಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಲಿ: ಸಚಿವರ ಆಪ್ತ ಸಹಾಯಕರೆನಿಸಿಕೊಂಡಿದ್ದ ಮಹೇಶ್ ರೆಡ್ಡಿ ಅವರ ನಿಗೂಢ ಸಾವಿನ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವ ಶ್ರೀರಾಮುಲು ಅವರು ಮಾತನಾಡಿ, ನನಗೆ ಸಂಬಂಧವೇ ಇಲ್ಲದ ವಿಷಯಕ್ಕೆ ನಾನ್ಯಾಕೆ ಪ್ರತಿಕ್ರಿಯಿಸಲಿ. ಅದ್ಕೆ ಅಂತಾ ಪೊಲೀಸ್ ಇಲಾಖೆ ಇದೆ. ಅವರು ಕಾನೂನು ಪ್ರಕಾರ ನಡೆಸುತ್ತಾರೆಂದರು.