ಬಳ್ಳಾರಿ: ಇಬ್ಬರು ವ್ಯಕ್ತಿಗಳು ಫೋನ್‌ನಲ್ಲಿ ಮಾತನಾಡಿದ ಆಡಿಯೋ ಈಗ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಆಡಿಯೋದಲ್ಲೇನಿದೆ?
ಅಪರಿಚಿತ ಆರೋಪಿ ತನ್ನ ಸ್ನೇಹಿತನಿಗೆ ಪೋನ್ ಮಾಡುವಾಗ, ಆ ಫೋನ್ ಕಾಲ್ ಮಿಸ್ ಆಗಿ ಬೇರೆಯವರಿಗೆ ಕನೆಕ್ಟ್ ಆಗಿದೆ. ಆಗ ಆತ ತಮ್ಮದೊಂದು ಗ್ಯಾಂಗ್ ಇದೆ. ಹುಡುಗಿಯರನ್ನು ರೇಪ್ ಮಾಡೋದೇ ನಮ್ಮ ಕೆಲಸ ಎಂದಿದ್ದಾನೆ. ಒಮ್ಮೆ ರೇಪ್ ಮಾಡುವಾಗ ಓರ್ವ ಯುವತಿ ಸಾವನ್ನಪ್ಪಿದ್ದಳು. ಹೀಗಾಗಿ ಸ್ನೇಹಿತರ ಗುಂಪು ಚದುರಿ ಹೋಗಿದೆ ಎಂದು ಮಾತನಾಡಿದ್ದಾನೆ. ಈ ಆಡಿಯೋ ಇದೀಗ ಜಿಲ್ಲೆಯಾದ್ಯಂತ ವೈರಲ್ ಆಗಿದೆ.
ಈ ಆಡಿಯೋ ಪೊಲೀಸರಿಗೂ ಈಗ ದೊಡ್ಡ ತಲೆನೋವಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಒಬ್ಬ ಆರೋಪಿಯಾದ್ರೆ, ಮತ್ತೊಬ್ಬ ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಮೇಲ್ನೋಟಕ್ಕೆ ಎರಡನೇ ವ್ಯಕ್ತಿ ವಿಜಯಪುರ ಜಿಲ್ಲೆಯವನು ಹಾಗೂ ಇದೆಲ್ಲವನ್ನೂ ಲಾರಿ ಮತ್ತು ಹಿಟಾಚಿ ನಡೆಸುವ ಚಾಲಕರ ಗುಂಪು ಮಾಡುತ್ತಿದೆ ಎನ್ನಲಾಗುತ್ತಿದೆ.
ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ:
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವ ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ಬಳ್ಳಾರಿಯಲ್ಲಿ ರೇಪ್ ಮಾಡುವ ಕುರಿತು ಉಲ್ಲೇಖಿಸಿದ್ದಾರೆ. ಈ ಕುರಿತು ಕ್ರೈಂ ಪೊಲೀಸರ ತಂಡ ವಿಚಾರಣೆ ನಡೆಸುತ್ತಿದೆ. ಆಡಿಯೋ ಪರಿಶೀಲನೆ ನಡೆಸಿದಾಗ ವಿಜಯಪುರದ ಹುಡುಗ ಮಾತನಾಡಿರುವುದು ಗೊತ್ತಾಗಿದೆ. ಒಂದು ಕೃತ್ಯದ ಬಗ್ಗೆ ಮಾತನಾಡಿದ್ದು, ಅಂತಹ ಕೃತ್ಯ ಎರಡು ವರ್ಷದಲ್ಲಿ ಯಾವುದೂ ನಡೆದಿಲ್ಲ. ಹೀಗಾಗಿ ಜನರು ಇದನ್ನು ನಂಬಬಾರದು. ಆಡಿಯೋದಲ್ಲಿ ಮಾತನಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.