ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಇಂದು 12 ದಿನಕ್ಕೆ ಕಾಲಿರಿಸಿದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಹತ್ತಿ ವ್ಯಾಪಾರಸ್ಥರ ಸಂಘ ಹಾಗೂ ದಲ್ಲಾಳಿ ವರ್ತಕರ ಸಂಘದ ಮುಖಂಡರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇಲ್ಲಿನ ಡಿಸಿ ಕಚೇರಿಯೆದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್ನಲ್ಲಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಈ ಮೂರು ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿದರು. ಬಳಿಕ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡೋದು ತರವಲ್ಲ. ಭಾಷಾವಾರು ವಿಂಗಡಣೆ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ಅಖಂಡವಾಗಿಯೇ ಉಳಿಸಲಾಗಿತ್ತು. ಕೂಡಲೇ ನೂತನ ವಿಜಯನಗರ ಜಿಲ್ಲೆ ರಚನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಹೊಸಪೇಟೆ - ಬಳ್ಳಾರಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಳ್ಳಾರಿ ಜಿಲ್ಲೆಗೆ ಐತಿಹಾಸಿಕ ಹಿನ್ನೆಲೆ ಇದೆ. ಆ ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಲಾಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಂಎಲ್ಎಗಳ ಸಂಖ್ಯೆ ಬೇಕಾಗಿದೆ. ಹೀಗಾಗಿ, ಈ ಜಿಲ್ಲೆಯ ವಿಭಜನೆಗೆ ಮುಂದಾಗಿದೆ ಎಂದು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ರವಿಕುಮಾರ ದೂರಿದರು.