ಬಳ್ಳಾರಿ: ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮಾತುಕತೆ ಮೂಲಕ ಇತ್ಯರ್ಥಪಡಿಸಲು ಸೆ.19ರಂದು ಇ-ಲೋಕ ಅದಾಲತ್ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೃಷ್ಣ ಬಿ. ಅಸೋಡೆ ಅವರ ಅಧ್ಯಕ್ಷತೆಯಲ್ಲಿ, ಬುಧವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇ-ಲೋಕ ಅದಲಾತ್‍ಗೆ ಸಂಬಂಧಿಸಿದಂತೆ ಸಭೆಗೆ ವಿವರಣೆ ನೀಡಿದ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶ ಕೃಷ್ಣ ಬಿ.ಅಸೋಡೆ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮಾತುಕತೆ ಮೂಲಕ ತೀರ್ಮಾನಿಸಲು ಇ-ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೀಣಾ ಎಂ.ನಾಯ್ಕರ್ ಅವರು ಇ-ಲೋಕ ಅದಾಲತ್ ಉದ್ದೇಶವನ್ನು ಸಭೆಗೆ ವಿವರಿಸಿದರು. ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ವಿಮಾ ಸಂಸ್ಥೆಯ ವ್ಯವಸ್ಥಾಪಕರು ಮತ್ತು ವಿಮಾ ಸಂಸ್ಥೆಯ ವಕೀಲರಗಳ ಜೊತೆ ಚರ್ಚೆ ನಡೆಸಿದ ನ್ಯಾ. ನಾಯ್ಕರ್ ಅವರು ಹೆಚ್ಚು ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಕೋರಿದರು.