ಬಳ್ಳಾರಿ: ಜಿಲ್ಲೆಯ ಸಂಡೂರು ಪುರಸಭೆಯ ನೀರು ಪೂರೈಕೆ ವಿಭಾಗದ 37 ದಿನಗೂಲಿ ನೌಕರರ 24 ತಿಂಗಳ ವೇತನ ನೀಡಿಕೆ ಮತ್ತು ಸೇವಾ ಖಾಯಮಾತಿಗೆ ಆಗ್ರಹಿಸಿ ದಿನಗೂಲಿ ನೌಕರರು ಪುರಸಭೆ ಕಚೇರಿಯ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ರು.
ಕಳೆದ ಮೂರು ದಿನಗಳಿಂದ ಧರಣಿ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ದ ದಿನಗೂಲಿ ನೌಕರರು ರೊಚ್ಚಿಗೆದ್ದಿದ್ದಾರೆ.
ದಿನಗೂಲಿ ನೌಕರರ ಬೇಡಿಕೆಗಳನ್ನು ಆಲಿಸಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣರಾವ್, ನೌಕರರ ಬೇಡಿಕೆಯ ಕುರಿತು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ರಾಜ್ಯವ್ಯಾಪಿ ಈ ಸಮಸ್ಯೆ ಇದೆ. ರಾಜ್ಯ ಸರ್ಕಾರ ಸಮಸ್ಯೆಯ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಮುಖ್ಯಾಧಿಕಾರಿಗಳ ಉತ್ತರದಿಂದ ತೃಪ್ತರಾಗದ ದಿನಗೂಲಿ ನೌಕರರು ಧರಣಿ ಮುಂದುವರಿಸಿದ್ದಾರೆ.
ರೈತ ಸಂಘ, ಹಸಿರು ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಲಾರಿ ಮಾಲೀಕರ ಸಂಘಟನೆಗಳ ಮುಖಂಡರಾದ ಬಿ.ಎಂ.ಉಜ್ಜಿನಯ್ಯ, ಪಿ.ಎಸ್. ಧರ್ಮಾನಾಯ್ಕ್, ಪಿ. ರಾಜು, ಬಾಬುನಾಯ್ಕ ಅವರು ದಿನಗೂಲಿ ನೌಕರರ ಸಂಘದ ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಧರಣಿಯಲ್ಲಿ ಭಾಗವಹಿಸಿ, ದಿನಗೂಲಿ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.