ಬಳ್ಳಾರಿ: ಕಾಳಸಂತೆಯಲ್ಲಿ ಮೆಣಸಿನಕಾಯಿ ಬೀಜ ಮಾರಾಟ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಅಧಿಕಾರಿಗಳು ಗಣಿನಗರಿಯ 41 ಬೀಜ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಬಿ.ಬೋಗಿಯವರ ನೇತೃತ್ವದ ಸಿಬ್ಬಂದಿ ಬೀಜ ಮಾರಾಟ ಕೇಂದ್ರದ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎರಡು ಅಗ್ರೋ ಟ್ರೇಡಿಂಗ್ ಕಂಪನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಬಾಲಾಜಿ ರಸ್ತೆಯಲ್ಲಿರುವ ಗವಿಸಿದ್ದೇಶ್ವರ ಆಗ್ರೋ ಟ್ರೇಡರ್ಸ್ನ ಮಳಿಗೆಗೆ ಈ ಅಧಿಕಾರಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಕೀಟನಾಶಕ ಮಾರಾಟದ ಪರವಾನಗಿ ಅವಧಿ ಮುಕ್ತಾಯವಾಗಿದ್ದು, ನವೀಕರಣ ಮಾಡಿಕೊಳ್ಳದೇ ಇರುವುದು ಕಂಡುಬಂದಿದೆ. ಹಾಗಾಗಿ ಈ ಮಳಿಗೆಯಲ್ಲಿರುವ ಕೀಟನಾಶಕ ಪರಿಕರಗಳನ್ನು ಜಪ್ತಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಂಡಿದ್ದಾರೆ.
ಇದಲ್ಲದೇ, ಬಳ್ಳಾರಿಯ ಏಕದಂತ ಟ್ರೇಡಿಂಗ್ ಕಂಪನಿ ಮಳಿಗೆಯಲ್ಲಿ ರಸಗೊಬ್ಬರವಲ್ಲದ ಪರಿಕರವನ್ನು ರಸಗೊಬ್ಬವೆಂದು ಮಾರಾಟ ಮಾಡುತ್ತಿರೋದು ಕಂಡುಬಂದಿದ್ದು, ಆ ಪರಿಕರವನ್ನು ಜಪ್ತಿಗೊಳಿಸಿದ್ದಾರೆ. ಮಾರಾಟಗಾರರ ವಿರುದ್ಧ ರಸಗೊಬ್ಬರ ಕಾಯ್ದೆ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ T5 ಸೂತ್ರ: 8 ಜನರನ್ನೊಳಗೊಂಡ ಸಮಿತಿ ರಚನೆ
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಾದ್ಯಂತ ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯ ಮುಂದುವರೆಯಲಿದೆ. ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿಯನ್ನು ನವೀಕರಿಸಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಮತ್ತು ದಾಸ್ತಾನಿನ ಎಲ್ಲ ದಾಖಲಾತಿಗಳನ್ನು ಕಡ್ಡಾಯವಾಗಿ ಕಾಯ್ದೆ ಅನ್ವಯ ನಿರ್ವಹಿಸಬೇಕು. ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಪರಿಕರಗಳನ್ನು ಮಾರಾಟ ಮಾಡೋದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರ ವರ್ಗ ಎಚ್ಚರಿಸಿದೆ.