ಬಳ್ಳಾರಿ: ನಗರದ ಎರಡು ಕಡೆಗಳಲ್ಲಿ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆ ಮೇರೆಗೆ ತಹಶೀಲ್ದಾರ್ ನಾಗರಾಜ್ ನೇತೃತ್ವದ ತಂಡ ತೆರವುಗೊಳಿಸಿತು.
ನಗರದ ಬಂಡಿಹಟ್ಟಿ ಏರಿಯಾದ ಸರ್ವೇ ನಂ.701 ಹಾಗೂ ಕೋಟೆ ಏರಿಯಾದ ಟಿಎಸ್ ನಂ. 20ರ ಸರ್ಕಾರಿ ಜಮೀನಿನಲ್ಲಿನ ಅನಧಿಕೃತ ಒತ್ತುವರಿಗಳನ್ನು ಇಂದು ತೆರವುಗೊಳಿಸಲಾಯಿತು.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಲು ಆಗಮಿಸಿದ್ದರು. ಈ ವೇಳೆ ತಹಶೀಲ್ದಾರ್ ನಾಗರಾಜ ಪ್ರತಿಕ್ರಿಯಿಸಿ, ಈ ಜಾಗ ಸರ್ಕಾರಕ್ಕೆ ಸೇರಿರುವಂಥದ್ದು. ತಮ್ಮಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಅದನ್ನು ಪ್ರಸ್ತುತಪಡಿಸಿ. ಅನಗತ್ಯವಾಗಿ ತೊಂದರೆ ಉಂಟುಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಂದಾಯ ನಿರೀಕ್ಷಕರಾದ ಸುರೇಶ, ವೀರೇಶ, ಶ್ರೀನಿವಾಸ್, ಸರ್ವೇಯರ್ ಪ್ರಸನ್ನ ಸೇರಿದಂತೆ ಗ್ರಾಮಲೆಕ್ಕಿಗರು ಇದ್ದರು.