ಬಳ್ಳಾರಿ: ನನಗಂತೂ ಖಾತೆ ಬದಲಾವಣೆ ಕುರಿತು ಯಾವುದೇ ಅಸಮಾಧಾನ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು 72ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಖಾತೆ ಬದಲಾವಣೆ ವಿಚಾರವಾಗಿ ಸಾರ್ವಜನಿಕ ಹೇಳಿಕೆ ನೀಡಬಾರದೆಂದು ಪಕ್ಷದ ರಾಜ್ಯ ನಾಯಕರಿಂದ ಆದೇಶ ಬಂದಿದೆ. ಹೀಗಾಗಿ, ನಾನಂತೂ ಏನ್ನನ್ನೂ ಹೇಳಲಿಕ್ಕೆ ಬಯಸೋದಿಲ್ಲ. ಖಾತೆ ಬದಲಾವಣೆ ಕುರಿತು ನನಗಂತೂ ಕಿಂಚಿತ್ತೂ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿವೇಶನ ಇರೋದರಿಂದಲೇ ನಾನು ಸಿಎಂ ಬಿಎಸ್ವೈ ಭೇಟಿಯಾಗುವ ವಿಚಾರ ಪ್ರಸ್ತಾಪಿಸಿರುವೆ. ಖಾತೆ ಬದಲಾವಣೆ ವಿಚಾರವಾಗಿ ಮಾತುಕತೆ ನಡೆಸಲು ಭೇಟಿಯಾಗುವೆ ಅಂತ ಹೇಳಿರುವೆ. ನಾನು ಎಲ್ಲೂ ಕೂಡ ಖಾತೆ ಬದಲಾವಣೆ ವಿಚಾರವಾಗಿ ಪ್ರಸ್ತಾಪಿಸಿ ಮಾತನಾಡೋದಾಗಿ ಎಲ್ಲೂ ಹೇಳಿಲ್ಲ. ನನ್ನದೇನಿದ್ದರೂ ಓನ್ಲಿ ಆ್ಯಕ್ಷನ್ ಅಷ್ಟೇ. ನೂ ರಿಯಾಕ್ಷನ್ ಎಂದರು.
ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ಅಂದಾಜು 20- 30 ಸಾವಿರಕ್ಕೂ ಅಧಿಕ ಅಕ್ಷೇಪಣಾ ಅರ್ಜಿಗಳು ಬಂದಿವೆ. ಅದರ ಪರಿಶೀಲನೆ ನಡೆಯಲಿ. ಆ ಬಳಿಕ, ವಿಜಯನಗರ ಜಿಲ್ಲೆ ಘೋಷಣೆ ವಿಚಾರ ಬರಲಿದೆ ಎಂದು ಹೇಳಿದರು.
ಪಕ್ಕದಲ್ಲೇ ಕುಳಿತಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು, ನೂತನ ವಿಜಯನಗರ ಜಿಲ್ಲೆ ಘೋಷಣೆಗೆ ನಮ್ಮದಂತೂ ಪ್ರಬಲ ವಿರೋಧವಿದೆ ಎಂದಾಗ, ಸಚಿವ ಆನಂದಸಿಂಗ್ ವಿರೋಧ ಎನ್ನುತ್ತಲೇ ನನ್ನ ಬಳಿ ಕುಳಿತಿದ್ದಾರೆ. ಆ ಮೇಲೆ ಅಡ್ಜೆಸ್ಟ್ ಆಗ್ತಾರೆ ಬಿಡಿ ಎಂದ್ರು.