ಬಳ್ಳಾರಿ: ಗಣಿನಾಡು ಬಳ್ಳಾರಿ - ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಈ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೋಸ್ಕರವೇ ಜಿಲ್ಲೆಯ ಕುಡಿತಿನಿ- ವೇಣಿವೀರಾಪುರ ಗ್ರಾಮಗಳ ಸಣ್ಣ - ಅತೀ ಸಣ್ಣ ರೈತರಿಂದ ಭೂಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಸ್ಥೆಯು ಈವರೆಗೂ ಕೂಡ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಡಿತಿನಿ - ವೇಣಿ ವೀರಾಪುರ ಗ್ರಾಮಗಳ ರೈತರು ಹೊಂದಿರುವ ಭೂಮಿಗಳು ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಪಕ್ಕದಲ್ಲೇ ಇರುವುದರಿಂದ ಈ ಭೂಮಿಗೆ ಭಾರೀ ಬೇಡಿಕೆಯಿದೆ. ಆದರೆ, ನ್ಯಾಷನಲ್ ಹೈವೇ ಅಥಾರಿಟಿ ಅವರು ಅತ್ಯಂತ ಕಡಿಮೆ ದರವನ್ನು ನಿಗದಿಪಡಿಸಿ ಬಲವಂತದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ರೈತರ ಗಂಭೀರ ಆರೋಪ ಮಾಡಿದ್ದಾರೆ.
ಎನ್.ಎ ಇರುವಂತಹ ಭೂಮಿಗೆ 5.50 ಲಕ್ಷ ರೂ. ಹಾಗೂ ನಾನ್ ಎನ್ಎ ಇರುವಂತಹ ಭೂಮಿಗೆ ಕೇವಲ 1.50 ಲಕ್ಷ ರೂ.ಗಳನ್ನು ನಿಗದಿಪಡಿಸಿ ಸಾಮಾನ್ಯ ರೈತರಿಂದ ಅಂದಾಜು 500 ಎಕರೆಯವರೆಗೂ ಕೂಡ ಭೂಮಿಯನ್ನು ವಶಪಡಿಸಿಕೊಂಡಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಗೆ ರೈತರು ಹೋಗಿರೋದು ಇದೀಗ ಬೆಳಕಿಗೆ ಬಂದಿದೆ. ಯಾಕೆಂದರೆ ಈ ಭಾಗದಲ್ಲಿ ಕೈಗೆಟುಕದ ದರದಲ್ಲಿ ಭೂಮಿಯನ್ನು ಖರೀದಿಸಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದರೂ ಅತ್ಯಂತ ಕಡಿಮೆ ದರದಲ್ಲಿ ಈ ನ್ಯಾಷನಲ್ ಹೈವೇ ಅಥಾರಿಟಿಯು ಕೆಐಡಿಬಿ ಮೂಲಕ ವಶಕ್ಕೆ ಪಡೆದಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಓದಿ: ಪಾಪ್ ಗಾಯಕಿ ರಿಹಾನ್ನಾಗೆ ರೈತರ ಕಷ್ಟ ಗೊತ್ತಾ? ಸಚಿವ ಸದಾನಂದಗೌಡ ಪ್ರಶ್ನೆ
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವೇಣಿ ವೀರಾಪುರ ಗ್ರಾಮದ ರೈತ ಮುಖಂಡ ಸಿದ್ದಾರೆಡ್ಡಿ ಅವರು, ನ್ಯಾಷನಲ್ ಹೈವೇ ಅಥಾರಿಟಿಯವರು ಭೂಸ್ವಾಧೀನ ಪಡಿಸಿಕೊಂಡಾಗಲೇ ಕುಡಿತಿನಿ - ವೇಣಿ ವೀರಾಪುರ ಗ್ರಾಮಗಳಲ್ಲಿನ ಭೂಮಿ ಬೆಲೆ ಗಗನಕ್ಕೇರಿತ್ತು. ಅದನ್ನು ಅತ್ಯಂತ ಕಡಿಮೆ ದರದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಿಂದ ಸಣ್ಣ- ಅತೀ ಸಣ್ಣ ರೈತರಿಗೆ ಭಾರೀ ಅನ್ಯಾಯವಾಗಿದೆ. ಕೂಡಲೇ ಅಂದಿನ ಭೂಮಿಯ ಬೆಲೆ ಹಾಗೂ ಸದ್ಯದ ಭೂಮಿಯ ಬೆಲೆಗೆ ಒಲೈಕೆ ಮಾಡಿ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ಜಿಲ್ಲಾಡಳಿತ ಮಧ್ಯೆಸ್ಥಿಕೆ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.