ಬಳ್ಳಾರಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2022 ರ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ಶನಿವಾರ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಯುವಸಬಲೀಕರಣ, ಕ್ರೀಡೆ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ನಿರ್ದೇಶನದಡಿ ನಂದಿನಿ ಅಗಸರ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಳ್ಳಾರಿ ನಗರ ಶಾಸಕ ನಾ ರಾ ಭರತ್ ರೆಡ್ಡಿ ಮಾತನಾಡಿ, ನಂದಿನಿ ಅವರು, ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಜನಿಸಿದವರು. ಇತ್ತೀಚೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2022 ರ ಏಷ್ಯನ್ ಗೇಮ್ಸ್ ನಲ್ಲಿ ಹೆಪ್ಟಾಥ್ಲಾನ್ ಈವೆಂಟ್ 800 ಮೀಟರ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ನಮ್ಮ ಜಿಲ್ಲೆಯ ವಜ್ರದಂತಿರುವ ಮನೆ ಮಗಳು ನಂದಿನಿ ಅಗಸರ ಅವರು, ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ತರಬೇತಿಗಾಗಿ ಅವರಿಗೆ ರೂ.3 ಲಕ್ಷ ಗೌರವಧನವಾಗಿ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಯನ್ನು ರೂಪಿಸಿಕೊಂಡಿರುವ ನಂದಿನಿ ಅವರು, ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಿ, ಇನ್ನೂ ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಳ್ಳಲಿ. ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಸಾಧಕಿ ನಂದಿನಿ ಅಗಸರ ಮಾತನಾಡಿ, ಈ ನನ್ನ ಕ್ರೀಡಾ ಸಾಧನೆಗೆ ಪ್ರೋತ್ಸಾಹಿಸಿದ ನನ್ನ ತಂದೆ-ತಾಯಿಗೆ ,ತರಬೇತಿಯಲ್ಲಿ ಕಾಳಜಿ ಮತ್ತು ಆಸಕ್ತಿ ವಹಿಸಿ ನನಗೆ ಶಕ್ತಿ ತುಂಬಿದ ನನ್ನ ಮಾರ್ಗದರ್ಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ, ವಿಧಾನ ಪರಿಷತ್ ಶಾಸಕ ವೈ.ಎಂ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಬಳ್ಳಾರಿ ತಹಸೀಲ್ದಾರ ಗುರುರಾಜ, ಸಿರುಗುಪ್ಪ ತಹಶೀಲ್ದಾರ ವಿಶ್ವನಾಥ, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಹೊನ್ನೂರಪ್ಪ, ನಂದಿನಿ ಅವರ ತಂದೆ ಯಲ್ಲಪ್ಪ ಹಾಗೂ ಇತರರು ಇದ್ದರು.
ಇದನ್ನೂಓದಿ:ಭಾರತ - ಪಾಕಿಸ್ತಾನ ಪಂದ್ಯ: ಭಾರತದ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳಿಂದ ವಿಶೇಷ ಪೂಜೆ