ಬಳ್ಳಾರಿ: ಯಾವುದೋ ಪರಿಸ್ಥಿತಿಯ ಕಾರಣದಿಂದ ತಾವೆಲ್ಲಾ ಇಲ್ಲಿಗೆ ಬಂದಿದ್ದೀರಿ. ನಾವು ಹುಟ್ಟಿದಾಗ ಉಸಿರು ಇರುತ್ತೆ, ಹೆಸರು ಇರುವುದಿಲ್ಲ. ಸತ್ತಾಗ ಉಸಿರು ಇರುವುದಿಲ್ಲ. ಹೆಸರು ಉಳಿಯುವಂತಹ ಜೀವನ ನಿಮ್ಮದಾಗಬೇಕೆಂದು ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ ಖೈದಿಗಳಿಗೆ ತಿಳಿ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಶ್ರೀ ಕಲ್ಯಾಣಸ್ವಾಮಿ ಆಧ್ಯಾತ್ಮಿಕ ಹಾಗೂ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಕೇಂದ್ರ ಕಾರಾಗೃಹದಲ್ಲಿ ಮನಪರಿವರ್ತನಕ್ಕಾಗಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ತಮ್ಮ 63 ದಿನಗಳ ಜೈಲುವಾಸದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು, ಎಲ್ಲರೂ ನಿಮ್ಮನ್ನು ನೀವು ಬದಲಾವಣೆ ಮಾಡಿಕೊಳ್ಳಬೇಕು, ಶೀಘ್ರವೇ ನಿಮ್ಮನ್ನು ಬಿಟ್ಟು ಬದುಕುತ್ತಿರುವ ಕುಟುಂಬವನ್ನು ಕೂಡಿಕೊಂಡು ಸಾರ್ಥಕ ಬದುಕು ನಿಮ್ಮದಾಗಬೇಕೆಂದರು ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನೇಶ ಮತ್ತು ಭೂಮಿಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಲ್ಯಾಣ ಮಹಾಸ್ವಾಮಿಗಳು, ಕರುಣಾಮೂರ್ತಿ ಶಾಸ್ತ್ರಿ, ಸಂಸದ ದೇವೇಂದ್ರಪ್ಪ, ಶಾಸಕ ಸೋಮಶೇಖರ್ ರೆಡ್ಡಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಬಿ.ಸ್ವಾಮಿ, ಅಣ್ಣಾ ಫೌಂಡೇಶನ್ ರಾಜಶೇಖರ್ ಮೂಲಾಲಿ ಹಾಜರಿದ್ದರು.