ಹೊಸಪೇಟೆ: ನಗರದ ಹೊರವಲಯದ ಲಿಟಲ್ ಪ್ಲವರ್ ಶಾಲೆಯಲ್ಲಿಂದು ಡಿ.22 ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಮಸ್ಟ್ ರಿಂಗ್ ಕಾರ್ಯ ನಡೆಯಿತು. ಮತಗಟ್ಟೆ ಅಧಿಕಾರಿಗಳು ಚುನಾವಣಾ ಸಂಬಂಧಿಸಿದ ಸಾಮಗ್ರಿಗಳನ್ನು ಪರಿಶೀಲಿಸಿಕೊಂಡರು. ಬಳಿಕ ಬಸ್ಗಳ ಮೂಲಕ ಮತಗಟ್ಟೆಗೆ ತೆರಳಿದರು. ಇದೇ ವೇಳೆ ಅಗತ್ಯ ಪೊಲೀಸ್ ಭದ್ರತೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಈಟಿವಿ ಭಾರತ್ ದೊಂದಿಗೆ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಮಹಾಂತೇಶ್ ಮಠದ ಅವರು ಮಾತನಾಡಿ, ತಾಲೂಕಿನಲ್ಲಿ 14 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 13 ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಸೀತಾರಾಮ ತಾಂಡಾ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದ ಹಿಂದೆ ಚುನಾವಣೆ ನಡೆದಿದೆ ಎಂದರು.
93 ಕ್ಷೇತ್ರಗಳಲ್ಲಿ 274 ಸ್ಥಾನಗಳಿವೆ. ಈ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ. ಇನ್ನು 233 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 114 ಮತಗಟ್ಟೆಯಲ್ಲಿ ಚುನಾವಣೆ ನಡೆಯಲಿದೆ. ಪಿಆರ್ ಒ-114, ಕಾಯ್ದಿರಿಸಿದ ಪಿಆರ್ ಒ-12, ಎಪಿಆರ್ ಒ-114, ಎಪಿಆರ್ ಒ ಕಾಯ್ದಿರಿಸಿದ-12, ಪಿಒ-228, ಪಿಒ ಕಾಯ್ದಿರಿಸಿದ-24, ಡಿ ದರ್ಜೆ ನೌಕರರ-114, ಕಾಯ್ದಿರಿಸಿದ ಡಿ ದರ್ಜೆ ನೌಕರರ-10 ಒಟ್ಟು 628 ಜನರು ಚುನಾವಣೆ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಮತಗಟ್ಟೆ ಕೇಂದ್ರಗಳ ಸುತ್ತಲೂ 100 ಮೀಟರ್ ನಿಷೇಧಾಜ್ಞೆ ಜಾರಿ : ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಸಿಆರ್‌ಪಿಸಿ ಕಾಯ್ದೆ 1973 ಕಲಂ 144ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಡಿ.22 ಮತ್ತು 27 ರಂದು ನಡೆಯುವ ಗ್ರಾಪಂ ಸಾರ್ವತ್ರಿಕ ಚುನಾವಣೆ-2020ಕ್ಕೆ ಸಂಬಂಧಿಸಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆ ಕೇಂದ್ರಗಳ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮತಗಟ್ಟೆಗಳ ಸುತ್ತಲೂ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಆದೇಶಿಸಿದ್ದಾರೆ.