ಬಳ್ಳಾರಿ: ಹಿಂದಿನ ಸರ್ಕಾರದ ಅವಧಿಯಲ್ಲಿ ಕಳ್ಳರು, ಸುಳ್ಳರು ಇದ್ದರೂ ಕೂಡ ಅವರು ಸತ್ಯಹರಿಶ್ವಂದ್ರರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಈಗ ಮುಖ್ಯಮಂತ್ರಿಯವರು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದರಿಂದ ಅಂತವರಿಗೆ ತಕ್ಕಶಾಸ್ತಿ ಆಗಲಿದೆ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಹವಂಬಾವಿ ಬಳಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಮಾಡಿಯೇ ತಾವು ಸತ್ಯ ಹರಿಶ್ವಂದ್ರರಂತೆ ನಟಿಸುವವರಿದ್ದು, ಈ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ. ಸಿಎಂ ಯಡಿಯೂರಪ್ಪನರ ನಿರ್ಧಾರವನ್ನು ನಾನು ವೈಯಕ್ತಿಕವಾಗಿ ಸ್ವಾಗತಿಸುವೆ. ಈ ರೀತಿಯ ಫೋನ್ ಕದ್ದಾಲಿಕೆ ಯಾರೂ ಮಾಡಬಾರದು, ಅದು ತಪ್ಪು. ಕೆಲ ಅಧಿಕಾರಿಗಳೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಫೋನ್ ಕದ್ದಾಲಿಕೆ, ದುರುಪಯೋಗ ವಿಚಾರದಲ್ಲಿ ಅನೇಕ ಸರ್ಕಾರಗಳು ಬಿದ್ದುಹೋಗಿವೆ. ನನ್ನ ಫೋನ್ ಕದ್ದಾಲಿಕೆಯಾಗಿದೆ ಅಂತ ಸುದ್ದಿ ಹರದಾಡ್ತಿದೆ, ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ನೆರೆಯಿಂದ ಲಕ್ಷ ಕೋಟಿ ರೂ. ಹಾನಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೋದಿಯವರು ವೈಮಾನಿಕ ಸಮೀಕ್ಷೆ ಮಾಡಿಲ್ಲ ಅಂತೀರಲ್ಲ. ನಿಮಗೆ ನಿಮ್ಮ ಸ್ವಕ್ಷೇತ್ರ ಬಾದಾಮಿಗೆ ಹೋಗಲಾಗಿಲ್ಲ. ಬಾದಾಮಿಯ ಮತದಾರರು ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ. ಆದರೆ ನೀವು ಅವರನ್ನು ನಿರ್ಲಕ್ಷ್ಯ ಮಾಡಿದ್ದೀರಿ. ದೆಹಲಿಗೆ ಹೋಗ್ತೀರಿ, ಬಿರಿಯಾನಿ ತಿಂತೀರಿ, ಆಗ ಕಣ್ಣಿಗೆ ಏನು ಆಗಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂಬ ಸುದ್ದಿಯನ್ನು ನಾನು ಮಾಧ್ಯಮದ ಮೂಲಕ ನೋಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ, ಸಿಎಂ ಎಲ್ಲವನ್ನೂ ಚರ್ಚೆ ಮಾಡಿದ್ದಾರೆ. ಹೈಕಮಾಂಡ್ ನಿಲುವನ್ನು ಸ್ಪಷ್ಟವಾಗಿ ಒಪ್ಪುತ್ತೇವೆ ಎಂದರು.