ಬಳ್ಳಾರಿ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಸೇರಿದಂತೆ ರೆಡ್ಡಿ ಸಹೋದರರಿಗೆ ಸದ್ಯ ಹಿನ್ನಡೆಯಾದ್ರೆ ಮುಂದೆ ಮುನ್ನಡೆಯಾದಂತೆಯೇ ಅರ್ಥ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಯ ನೀಡಿದ್ದಾರೆ.
ಬಳ್ಳಾರಿಯ ಮಿಲ್ಲರ್ ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಯನ ಸೇವಾ ಪ್ರೊಜೆಕ್ಟ್ ನಿಂದ ಆಯೋಜಿಸಿದ್ದ 'ಅಂಧತ್ವ ಮುಕ್ತ ಬಳ್ಳಾರಿ ನಗರ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ರೆಡ್ಡಿ ಸಹೋದರರನ್ನ ಕಡೆಗಣಿಸಲಾಗುತ್ತೆ ಎಂಬ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ನಮಗೆ ಈಗ ಹಿನ್ನಡೆಯಾಗಿದೆ ಅಂದ್ರೆ ಮುಂದೆ ಮುನ್ನಡೆ ಆಗುತ್ತೆ ಅಂತಾನೆ ಅರ್ಥ. ಅದ್ಕೆ ನಾವೇನು ಮಾಡಲಿಕ್ಕಾಗಲ್ಲ ಎಂದ್ರು.
ಸಿಎಂ ನಡೆಗೆ ಬೇಸರಗೊಂಡ ಶಾಸಕ ರೆಡ್ಡಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಬ್ಯಾಡ ಎಂದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಚನೆಗೆ ಮುಂದಾಗಿದ್ದಾರೆ. ನಾನೊಬ್ಬನೇ ಸಿಎಂ ಬಿಎಸ್ವೈ ಅವರನ್ನ ಭೇಟಿಯಾಗಿದ್ದೆ. ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಬೇಡ ಎಂದಿದ್ದೆ. ಆದ್ರೂ ಸಿಎಂ ಸುತಾರಾಂ ಒಪ್ಪುತ್ತಿಲ್ಲ. ಈಗ ಕೈಬಿಟ್ಟರೂ ಕೂಡ ಮುಂದೆ ಬರೋರು ಮಾಡಿಯೇ ತೀರುತ್ತಾರೆ ಅಂತ ಸಬೂಬು ನೀಡುತ್ತಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಬೇಸರಗೊಂಡರು.
ನವೆಂಬರ್ 26 ರ ಬಂದ್ಗೆ ಬಾಹ್ಯ ಬೆಂಬಲ ನೀಡುವೆ:
ನವೆಂಬರ್ 26 ರಂದು ನಡೆಯುವ ಬಳ್ಳಾರಿ ಬಂದ್ಗೆ ನಾನಂತೂ ಬಾಹ್ಯ ಬೆಂಬಲ ವ್ಯಕ್ತಪಡಿಸುವೆ. ನಾನು ಈ ಸರ್ಕಾರದ ಶಾಸಕನಾಗಿರುವುದರಿಂದ ಬಹಿರಂಗವಾಗಿ ಬಂದ್ನಲ್ಲಿ ಭಾಗವಹಿಸಲು ಆಗೋದಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತೆ. ಹೀಗಾಗಿ, ನನ್ನ ವಿರೋಧ ಅಂತೂ ಪ್ರಬಲವಾಗಿ ಇರುತ್ತೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದ್ರು.