ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಎಲ್ಎಲ್ಸಿ ಕಾಲುವೆಗೆ ಆಗಸ್ಟ್ 1ರಿಂದ ನೀರು ಬಿಡಲಾಗಿದ್ದು, ಶಿವಪುರ ಕೆರೆಗೆ ನೀರು ತುಂಬಿಸುವ ಕಾರ್ಯದ ಸಲುವಾಗಿಯೇ ಹೊಸದಾಗಿ ಯಂತ್ರೋಪಕರಣ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆ ಯಂತ್ರೋಪಕರಣಗಳಿಗೆ ವಿಶೇಷಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಇಲಾಖೆಯ ಅಧಿಕಾರಿಗಳೊಂದಿಗೆ ಬಳ್ಳಾರಿ ನಗರದ ಹಲವೆಡೆ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ಶಾಸಕರು ಚರ್ಚಿಸಿದ್ದಾರೆ.
ಎಲ್ಎಲ್ಸಿ ಕಾಲುವೆಗೆ ಶೀಘ್ರವೇ ಹರಿದು ಬರುವ ನೀರಿನಿಂದ ಶಿವಪುರ ಕುಡಿಯುವ ನೀರಿನ ಕೆರೆಯ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗನೆ ತಾಲೂಕಿನ ನಾನಾ ಗ್ರಾಮಗಳು ಹಾಗೂ ಬಳ್ಳಾರಿ ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ವ್ಯತ್ಯಯವನ್ನು ಬಗೆಹರಿಸಬೇಕೆಂದು ತಾಕೀತು ಮಾಡಿದ್ದಾರೆ. ಇದೇ ವೇಳೆ ಅಂದಾಜು 60 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು ಕೆರೆಯ ಕಾಮಗಾರಿಯನ್ನು ಸೋಮಶೇಖರ ರೆಡ್ಡಿ ಪರಿಶೀಲಿಸಿದ್ದು,ಆದಷ್ಟು ಬೇಗ ನಿರ್ಮಾಣದ ಕಾರ್ಯ ಮುಗಿಯಬೇಕೆಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.