ಬಳ್ಳಾರಿ: ಬಿ.ಶ್ರೀರಾಮುಲು ಅವರು ಜಿಲ್ಲೆಯ 5 ಮೀಸಲಾತಿ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಅವರ ವಿರುದ್ಧ ನಾನು ಪ್ರತಿ ಸ್ಪರ್ಧಿಯಾಗಿ ನಿಂತುಕೊಳ್ಳುತ್ತೇನೆ. ತಾಕತ್ತಿದ್ದರೆ ಅವರು ಗೆದ್ದು ಬರಲಿ ಎಂದು ಕಂಪ್ಲಿ ವಿಧಾನಸಭಾ ಶಾಸಕ ಜೆ.ಎನ್.ಗಣೇಶ ಸವಾಲೆಸೆದಿದ್ದಾರೆ.
ಜಿಲ್ಲೆಯ ಕಂಪ್ಲಿ ತಾಲೂಕಿನ ಬಾಳಾಪುರ ಗ್ರಾಮದಲ್ಲಿ ನಡೆದ ಸಿಸಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಹಗುರವಾಗಿ ಮಾತಾಡೋದನ್ನು ಸಚಿವ ಶ್ರೀರಾಮುಲು ಬಿಡಬೇಕು. ಅವರು ಏಕಾಂಗಿಯಲ್ಲ, ಈ ರಾಜಕಾರಣದಲ್ಲಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿವರೆಗೆ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದರು.
ನಿಮಗೇನಾದ್ರೂ ಮತ್ತೊಂದು ಉಪಚುನಾವಣೆ ಎದುರಿಸಬೇಕೆಂಬ ಕಾತುರ ಇದ್ರೆ ಮೊಳಕಾಲ್ಮೂರು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು, ಈ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಮೀಸಲಾದ ಕ್ಷೇತ್ರದಲ್ಲಿ ಸ್ಪರ್ಧಿಸಿ. ನಿಮ್ಮ ಎದುರಾಳಿಯಾಗಿ ನಾನು ಸ್ಪರ್ಧಿಸುವೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂದ ಮಾತ್ರಕ್ಕೆ ಯಾರ ಬಗೆಗೂ ಹಗುರವಾಗಿ ಮಾತನಾಡಬಹುದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.