ಬಳ್ಳಾರಿ: ಗಣಿ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸದೆ ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದಕ್ಕೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ನಗರದ ಕಮ್ಮ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಘೋಷಣೆ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗಿಸಿರುವುದು ಈ ಸರ್ಕಾರದ ತರಾತುರಿ ನಿರ್ಧಾರ.
ಈ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಗಣಿ ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದಿದ್ದರು. ಪರ -ವಿರೋಧ ಅನಿಸಿಕೆ ವ್ಯಕ್ತವಾದ ಹಿನ್ನೆಲೆ ಮತ್ತೊಮ್ಮೆ ಸಭೆ ಕರೆಯುವುದಾಗಿ ಹೇಳಿದ್ದರು. ಆದರೀಗ ಎಕಾಏಕಿ ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ರಾಜ್ಯ ಸರ್ಕಾರ ಎದುರಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಅಖಂಡ ಬಳ್ಳಾರಿ ಜಿಲ್ಲೆ ಮತ್ತೆ ಒಂದಾಗಲಿದೆ : ಅಖಂಡ ಬಳ್ಳಾರಿ ಜಿಲ್ಲೆ ಮತ್ತೆ ಒಂದಾಗಲಿದೆ. ಈಸ್ಟ್, ವೆಸ್ಟ್ ಜರ್ಮನಿ ಹೇಗೆ ಒಂದಾಯ್ತು ಅದೇ ರೀತಿ ಬಳ್ಳಾರಿ ಮತ್ತೆ ಒಂದಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನು ಓದಿ: ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ: 11 ತಾಲೂಕುಗಳನ್ನು ಹಂಚಿಕೆ ಮಾಡಿದ ರಾಜ್ಯ ಸರ್ಕಾರ!
ನೂತನ ವಿಜಯನಗರ ಜಿಲ್ಲೆ ಘೋಷಣೆ ವಿರೋಧಿ ಹೋರಾಟದ ಕುರಿತು ಚರ್ಚಿಸುವ ಸಲುವಾಗಿ ರಾಜಕೀಯ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವೆ. ಸಭೆ ನಡೆಸಿದ ಬಳಿಕ ಸಿಎಂ ಭೇಟಿಯಾಗಲಿದ್ದೇನೆ. ಸಿಎಂ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಖಂಡ ಜಿಲ್ಲೆಯಾಗಿರಬೇಕು ಎನ್ನುವುದು ನನ್ನ ಮತ್ತು ಎಲ್ಲಾ ಶಾಸಕರ ಅಭಿಪ್ರಾಯ ಎಂದರು.
ಕ್ಯಾಬಿನೆಟ್ ಮಿಟಿಂಗ್ನಲ್ಲಿ ನಾನು ಕಣ್ಣೀರು ಹಾಕಿಲ್ಲ. ಕಣ್ಣೀರು ಹಾಕುವ ಅವಶ್ಯಕತೆ ನನಗಿಲ್ಲ. ಆದರೆ, ಜಿಲ್ಲೆ ಅಖಂಡವಾಗಿರಬೇಕು ಅಂತಾ ಭಾವನಾತ್ಮಕವಾಗಿ ಹೇಳಿದ್ದೆ. ಕಣ್ಣೀರು ಹಾಕುವ ಪ್ರಮೇಯವೇ ಬರಲ್ಲ ಎಂದು ಸ್ಪಷ್ಟಪಡಿಸಿದರು.