ಹೊಸಪೇಟೆ: ಕಾಂಗ್ರೆಸ್ ಪಕ್ಷದ ಹಗರಿಬೊಮ್ಮನ ಹಳ್ಳಿಯ ಶಾಸಕ ಭೀಮಾ ನಾಯ್ಕ ವಿಜಯ ನಗರದ ಉಪ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ. ಉಪ ಚುನಾವಣೆಯಲ್ಲಿ ವೆಂಕಟರಾವ್ ಘೋರ್ಪಡೆ ಅವರಿಗೆ ಬೆಂಬಲಿಸುತ್ತಿಲ್ಲ ಎನ್ನುವ ವದಂತಿಗೆ ಶಾಸಕ ಭೀಮಾ ನಾಯ್ಕ ತೆರೆ ಎಳೆದಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಗರಿ ಬೊಮ್ಮನಹಳ್ಳಿಯ ಶಾಸಕ ಭೀಮಾ ನಾಯ್ಕ, ನಾನು ಇವತ್ತಿನಿಂದ ಪಕ್ಷದ ಗೆಲುವುಗಾಗಿ ಶ್ರಮಿಸುತ್ತೇನೆ. ನಮ್ಮ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ಬೆಂಬಲ ಸೂಚಿಸುತ್ತೇನೆ. ನನ್ನ ಕೆಲಸ ಕಾರ್ಯಗಳಿಂದ ನಾನು ಬರುವುದು ಸ್ವಲ್ಪ ತಡವಾಗಿದೆ ಎಂದು ಹೇಳಿ ವಿಜಯನಗರದ ಉಪ ಚುನಾವಣೆಯಲ್ಲಿ ಭೀಮಾ ನಾಯ್ಕ ಕಾಣುತ್ತಿಲ್ಲ ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ.
ಪಕ್ಷದ ಮುಖಂಡರ ಜತೆಗೆ ನಾನು ಪಕ್ಷದ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತೇನೆ. ವಿಜಯನಗರದ ಉಪ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಕರ್ತವ್ಯವಾಗಿದೆ. ನಾವೆಲ್ಲ ಮನೆ ಮನೆಗೆ ಹೋಗಿ ಮತದಾರರು ಹಾಗೂ ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತೇವೆ. ಇಂದಿನಿಂದ ಉಪ ಚುನಾವಣೆಯಲ್ಲಿ ಭಾಗಿಯಾಗಲಿದ್ದೇನೆ. ನನ್ನ ವೈಯಕ್ತಿಕ ಕಾರಣದಿಂದ ಕೆಲ ದಿನಗಳು ಬರಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.