ಬಳ್ಳಾರಿ: ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದೆಲ್ಲ ಕೇಂದ್ರ ಬಿಜೆಪಿ ನಾಯಕರ ಅಂತಿಮ ತೀರ್ಮಾನ ಅಲ್ಲ, ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಈಶ್ವರಪ್ಪ ಮಾತನಾಡಿದ್ರು. ಸಿಎಂ ಬಿಎಸ್ ಯಡಿಯೂರಪ್ಪ ಪರ - ವಿರೋಧದ ಸಹಿ ಸಂಗ್ರಹ ಅಭಿಯಾನ ನಡೆದಿದೆ ಅಂತಾ ನಿಮಗೆ ಯಾರು ಹೇಳಿದ್ದು? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ರು. ಮಾಧ್ಯಮದವರು ಶಾಸಕ ರೇಣುಕಾಚಾರ್ಯ ಎಂದಾಗ, ಅದೆಲ್ಲ ಶುದ್ಧ ಸುಳ್ಳು. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದ್ರು.
ಕೇಂದ್ರ ನಾಯಕರು ಯಾವುದೇ ಸಹಿ ಸಂಗ್ರಹಕ್ಕೆ ಬೆಲೆ ಕೊಡಲ್ಲ. ಸದ್ಯ ಬಿಜೆಪಿಯಲ್ಲಿ ಯಾವುದೇ ಸಹಿ ಸಂಗ್ರಹ ನಡೆದಿಲ್ಲ. ಎಂ ಪಿ ರೇಣುಕಾಚಾರ್ಯ ಹೇಳಿದ್ದನ್ನೇ ಹೇಳುತ್ತಾರೆ. ಅದನ್ನೇ ನೀವು ಹತ್ತು ಸಲ ತೋರಿಸುತ್ತೀರಿ ಅಂತಾ ಸಚಿವ ಈಶ್ವರಪ್ಪ ಸಿಡಿಮಿಡಿಗೊಂಡರು. ಇಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪರವೂ ಇಲ್ಲ ವಿರೋಧವೂ ಇಲ್ಲ. ಕೇಂದ್ರದ ನಾಯಕರ ತೀರ್ಮಾನವೇ ಅಂತಿಮ ಎಂದ್ರು.
ಲಾಕ್ಡೌನ್ ತೆರವುಗೊಳಿಸಿದ್ರೆ ಸೂಕ್ತ ಅನ್ನಿಸುತ್ತೆ:
ಸದ್ಯದ ಮಟ್ಟಿಗೆ ಕೊರೊನಾ ಸೋಂಕು ರಾಜ್ಯವ್ಯಾಪಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಲಾಕ್ಡೌನ್ ತೆರವುಗೊಳಿಸಿದ್ರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಚಿವ ಈಶ್ವರಪ್ಪ ಹೇಳಿದ್ರು.