ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿದವರು. ಅವರು ಯಾವತ್ತಿದರೂ ಬಿಜೆಪಿ ಪಕ್ಷದ ಪರವಾಗಿ ಇರುತ್ತಾರೆ. ಅವರಿಗೆ ಮುಜುಗರ ತರುವ ಕೆಲಸವನ್ನ ಯಾರೂ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಜನಾರ್ದನ ರೆಡ್ಡಿ ಮುನಿಸು ವಿಚಾರವಾಗಿ ಬಳ್ಳಾರಿಯಲ್ಲಿ ಮಾತನಾಡಿದ ಸಚಿವರು, ಜನಾರ್ದನ ರೆಡ್ಡಿ ಯಾವ ಕಾರಣಕ್ಕೆ ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ. ಮಾಧ್ಯಮದ ಮೂಲಕ ನನಗೂ ವಿಚಾರ ಗೊತ್ತಾಗಿದೆ. ಜನಾರ್ದನ ರೆಡ್ಡಿ ಅವರು ನಮ್ಮ ನಾಯಕರು. ಈ ಬಗ್ಗೆ ನಾನು ಜನಾರ್ದನ ರೆಡ್ಡಿ ಜೊತೆ ಮಾತನಾಡುವೆ ಎಂದರು.
ನವೆಂಬರ್ 20 ರಂದು ಬಳ್ಳಾರಿಯಲ್ಲಿ ಬೃಹತ್ ಎಸ್ ಟಿ ಸಮಾವೇಶ ನಡೆಯಲಿದೆ. ನಿರೀಕ್ಷೆಗೂ ಮೀರಿ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಆಹ್ವಾನ ಮಾಡಲು ನಾನು ಈಗಾಗಲೇ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡಿರುವೆ. ಕೇಂದ್ರ ನಾಯಕರಿಗೂ ಆಹ್ವಾನ ನೀಡಲಾಗುತ್ತದೆ. ಕೇಂದ್ರ ನಾಯಕರು ಭಾಗಿಯಾಗುವ ಕುರಿತು ಮುಖ್ಯಮಂತ್ರಿ ಅವರು ನಿರ್ಧಾರ ಮಾಡಲಿದ್ದಾರೆ. ಸಮಾವೇಶಕ್ಕೆ ನಗರದ ಹೊರವಲಯದಲ್ಲಿ 30 ಎಕರೆ ಪ್ರದೇಶದ ಜಮೀನಿನಲ್ಲಿ ವೇದಿಕೆ ಹಾಗೂ ಪೆಂಡಾಲ್ ಹಾಕಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಮೀಸಲಾತಿ ಹೆಚ್ಚಳಕ್ಕಾಗಿ ಕಳೆದ ನಾಲ್ಕು ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಯಾವ ಸರ್ಕಾರಗಳು ಮೀಸಲಾತಿ ಹೆಚ್ಚಳ ಮಾಡಲಿಲ್ಲ. ನನಗೆ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇತ್ತು. ಶ್ರೀರಾಮುಲು ಮೀಸಲಾತಿ ಕೊಡಿಸಲು ಆಗುವುದಿಲ್ಲ ಅಂತಾ ಟೀಕೆ ಮಾಡಿದರು. ಆದರೆ, ಶ್ರೀರಾಮುಲು ಬೇರೆಯವರ ಟೀಕೆಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದರು.
ಬಳ್ಳಾರಿಯಲ್ಲಿ ಫೈಲ್ವಾನ್ ರಂಜಾನ್ ಸಾಬ್ ಹಾಗೂ ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಶ್ರೀಘದಲ್ಲೇ ಸ್ಥಾಪನೆ ಮಾಡಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಓದಿ: ಮೀಸಲಾತಿ ಕೊಡಲು ಸರ್ಕಾರ ಒಪ್ಪಿದೆ : ಶ್ರೀಗಳು ಧರಣಿ ವಾಪಸ್ ಪಡೆಯಬೇಕು - ಸಚಿವ ಶ್ರೀರಾಮುಲು ಮನವಿ