ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಅಹವಾಲು ಸ್ವೀಕರಿಸಿದರು.
ಸೋಂಕಿತರಿಗೆ ಇದೇ ವೇಳೆ ಆತ್ಮಸ್ಥೈರ್ಯ ತುಂಬಿದ ಅವರು, ಗುಣಮುಖರಾಗಿ ಆದಷ್ಟು ಬೇಗ ಹೊರಬರುತ್ತೀರಿ ಎಂದು ತಿಳಿಸಿದರು. ವಿವಿಧ ರೀತಿಯ ದೀರ್ಘ ಕಾಯಿಲೆಗಳಿಂದ ಬಳಲುತ್ತಿರುವ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಚಿವರು ಅನೇಕರ ಅಹವಾಲು ಸ್ವೀಕರಿಸಿದರು. ಗುಣಮಟ್ಟದ ಊಟ, ಚಿಕಿತ್ಸೆ ಕೊಡಲಾಗುತ್ತಿದ್ದು, ಸ್ವಚ್ಛತೆ ಕೂಡ ಚೆನ್ನಾಗಿದೆ. ಆದರೆ ಶೌಚಾಲಯ ದಿನಕ್ಕೆ ಒಂದು ಬಾರಿ ಮಾತ್ರ ಕ್ಲೀನ್ ಮಾಡಲಾಗುತ್ತಿದ್ದು, ಎರಡು ಬಾರಿ ಕ್ಲೀನ್ ಮಾಡುವಂತೆ ಸಚಿವರಲ್ಲಿ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಆಸ್ಪತ್ರೆಗೆ ಆಡಳಿತ ಮಂಡಳಿಗೆ ಸೂಚನೆ ನೀಡಲಾಯಿತು.
ಕೊರೊನಾ ಬಂದಿದೆ ಎಂಬ ಭಯಬೇಡ; ತಮ್ಮೆಲ್ಲರೊಂದಿಗೆ ಜಿಲ್ಲಾಡಳಿತ ಮತ್ತು ಸರಕಾರವಿದೆ. ತಾವು ಆಸ್ಪತ್ರೆಯೊಳಗೆ ವಿಶ್ರಾಂತಿ ತೆಗೆದುಕೊಂಡು ಗುಣಮುಖರಾಗಿ ಹೊರಬನ್ನಿ ಎಂದು ಹಾರೈಸಿದರು. ತದನಂತರ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಕೊಠಡಿಯಲ್ಲಿ ಎಲ್ಲ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜಿಲ್ಲಾಡಳಿತದಿಂದ ಹಾಗೂ ಸರಕಾರದಿಂದಾಗಬೇಕಾಗುವ ಸಹಾಯ-ಸಹಕಾರಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ವೈದ್ಯರಿಗೆ ಆತ್ಮ ಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‌ಒ ಡಾ.ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.