ಬಳ್ಳಾರಿ: ಅವು ಸುಮಾರು 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಸ್ಥಾನಗಳು. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಕ್ಕೆ ಈಗ ಗಣಿ ಕಂಟಕ ಶುರುವಾಗಿದೆ. ಕೂಗಳತೆ ದೂರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಪದೇ ಪದೆ ಹಾನಿಯಾಗುತ್ತಿದೆ. ಇದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುಮಾರಸ್ವಾಮಿ (ಸ್ಕಂದಗಿರಿ) ಬೆಟ್ಟದ ಹಸಿರು ರಮಣೀಯ ಪ್ರದೇಶದಲ್ಲಿ 12 ನೇ ಶತಮಾನದಲ್ಲಿ ಕುಮಾರಸ್ವಾಮಿ ಮತ್ತು ಪಾರ್ವತಿ ದೇಗುಲ ನಿರ್ಮಿಸಲಾಗಿದೆ. ಕಳೆದ ಹತ್ತಾರು ವರ್ಷಗಳಿಂದ ದೇಗುಲದ ಕೂಗಳತೆಯ ಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ಗಣಿಗಾರಿಕೆಯಿಂದ ಈ ಐತಿಹಾಸಿಕ ದೇವಸ್ಥಾನಗಳಿಗೆ ಕಂಟಕ ಶುರುವಾಗಿದೆ.
1200 ವರ್ಷಗಳ ಹಿಂದೆ ಚಾಲುಕ್ಯ ರಾಷ್ಟ್ರಕೂಟರು ನಿರ್ಮಿಸಿದ ಈ ದೇಗುಲಕ್ಕೆ ಕಂಟಕ ಬಂದೊದಗಿದ್ದು, ಪಾರ್ವತಿ ದೇಗುಲದ ಒಳಗಡೆ ಮಳೆಯಿಂದ ಸೋರುತ್ತಿದೆ. ಇಂತಹ ಐತಿಹಾಸಿಕ ಸ್ಮಾರಕ ಪೌರಾಣಿಕವಾಗಿ ಮತ್ತು ರಾಷ್ಟ್ರದ ಕೆಲವೇ ಕೆಲವು ಈ ತರಹದ ಶಿಲ್ಪ ಕಲೆಯನ್ನು ಈ ದೇಗುಲಗಳು ಹೊಂದಿರುವುದು ವಿಶೇಷ ಮತ್ತು ಇತಿಹಾಸದಲ್ಲಿಯೂ ಇದು ದಾಖಲಾಗಿದೆ.
ದೇವಸ್ಥಾನದ ಕೆಲ ಭಾಗದಲ್ಲಿ ಬಿರುಕು: ಈಗಾಗಲೇ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳ 600 ಮೀಟರ್ ಸಮೀಪದಲ್ಲಿಯೇ ಗಣಿಗಾರಿಕೆ ನಡೆಯುತ್ತಿರುವ ಕಾರಣ ಎರಡು ದೇವಸ್ಥಾನಗಳು ಕೆಲ ಭಾಗದಲ್ಲಿ ಬಿರುಕು ಬಿಟ್ಟಿವೆ. ಈಗ ಮತ್ತೆ ಐತಿಹಾಸಿಕ ಪಾರ್ವತಿ ದೇಗುಲದ ಕಲ್ಲು ಕುಸಿದು ಬಿದ್ದಿರುವುದು ಭಕ್ತರಿಗೆ ಆತಂಕ ಮೂಡಿಸಿದೆ.
ಗಣಿಗಾರಿಕೆ ನಿಷೇಧವಾಗಿಲ್ಲ: 'ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ನಡೆಯುತ್ತಿರುವುದರಿಂದ ಸಾಕಷ್ಟು ಹಾನಿಯಾಗುತ್ತದೆ ಎಂಬ ಕಾರಣಕ್ಕೆ ನಾವು ಸತತವಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಈಗಲೂ ಮೈನಿಂಗ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಅರಣ್ಯ ಇಲಾಖೆ, ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದು 6ನೇ -7ನೇ ಶತಮಾನದ ದೇವಸ್ಥಾನ. ಇದು ಹಾಗೆಯೇ ಉಳಿಯಬೇಕು ಎಂದು ಒತ್ತಾಯಿಸಿದ್ದೇವೆ. ಇನ್ನಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ದೇವಸ್ಥಾನದ ಸುಮಾರು 2 ಕಿ ಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಿದರೆ ಮಾತ್ರ ಈ ಐತಿಹಾಸಿಕ ದೇವಾಲಯ ಉಳಿಯುತ್ತದೆ' ಎಂದು ಜನಸಂಗ್ರಾಮ ಪರಿಷತ್ನ ರಾಜ್ಯ ಸಮಿತಿ ಸದಸ್ಯ ಶ್ರೀಶೈಲ ಅಭಿಪ್ರಾಯಪಟ್ಟಿದ್ದಾರೆ.
'6ನೇ ಮತ್ತು 7ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ದೇವಾಲಯಗಳು 2000 ಹಾಗೂ 2010ನೇ ಇಸವಿಯಲ್ಲಿ ನಡೆದ ಅವ್ಯಾಹತ ಗಣಿಗಾರಿಕೆಯಿಂದ ತೊಂದರೆಗೆ ಸಿಲುಕಿವೆ. 2010ನೇ ಇಸವಿಯಲ್ಲಿಯೇ ದೇವಸ್ಥಾನದ ಒಳಗಡೆ ಮಳೆಯಿಂದ ಸೋರುತ್ತಿತ್ತು. ಈಗ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಬೇಕೆಂದು ಪುರಾತತ್ವ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಹಾಗೂ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ಆದರೆ ಸರ್ಕಾರ ಮಾತ್ರ ಗಣಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ದೇವರಾಜ ಅರಸು ಅವರ ಆದೇಶವನ್ನು ಪಾಲನೆ ಮಾಡದೆ. ಕೇವಲ 300 ಮೀಟರ್ ವ್ಯಾಪ್ತಿಗೆ ಗಣಿಗಾರಿಕೆಗೆ ಅನುಮತಿ ನೀಡಿದೆ. ಇಂತಹ ಪುರಾತನ ಹಾಗೂ ಐತಿಹಾಸಿಕ ದೇವಾಲಯ ಉಳಿಬೇಕಾದರೆ ಗಣಿಗಾರಿಕೆ ನಿಲ್ಲಿಸಬೇಕು' ಎಂದು ಜನಸಂಗ್ರಾಮ ಪರಿಷತ್ನ ರಾಜ್ಯ ಉಪಾಧ್ಯಕ್ಷರಾದ ಎಂ. ಶಿವಕುಮಾರ್ ಒತ್ತಾಯಿಸಿದರು.
ಆದೇಶ ಪಾಲನೆಯಾಗುತ್ತಿಲ್ಲ: ಇನ್ನೂ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತಿವೆ. ಆದರೆ, ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುವ ಹೊಸಪೇಟೆ ತಾಲೂಕಿನ ಜಂಭುನಾಥ್ ಸ್ವಾಮಿ ದೇವಸ್ಥಾನದ 2 ಕಿ. ಮೀ. ಸುತ್ತ ಗಣಿಗಾರಿಕೆ ನಡೆಸದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಇದೇ ಆದೇಶ ಐತಿಹಾಸಿಕ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಸ್ಥಾನಗಳಿಗೂ ವಿಸ್ತರಿಸಬೇಕು. ಆದರೆ, ಸರ್ಕಾರಗಳು ಗಣಿ ಕಂಪನಿಗಳಿಗೆ ಮಣಿದ ಕಾರಣ ಇಲ್ಲಿ ಸುಪ್ರೀಂಕೋರ್ಟ್ ಆದೇಶ ಕೂಡ ಪಾಲನೆ ಆಗುತ್ತಿಲ್ಲ.
ಲಾಭಿಗೆ ಮಣಿದಿರುವುದು ದುರಂತ: ಸರ್ಕಾರಗಳು ಈ ದೇವಾಲಯದ ಸಂರಕ್ಷಣೆಗಿಂತ ಗಣಿ ಕಂಪನಿಗಳಾದ ಜಿಂದಾಲ್ MSPL MML NMDCಯಂತಹ ಉದ್ಯಮಿಗಳ ಸಂರಕ್ಷಣೆಯೇ ಹೆಚ್ಚಾದಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಈ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮಾಡದೇ ಸರ್ಕಾರ ಗಣಿ ಕಂಪನಿಗಳ ಲಾಬಿಗೆ ಮಣಿದಿರುವುದು ದುರಂತವೇ ಸರಿ ಅಂತಾರೆ ಸ್ಥಳೀಯರು.
ಓದಿ: ಹೊನ್ನಾಳಿಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫ್ಲೆಕ್ಸ್