ಬಳ್ಳಾರಿ: ವಿಮ್ಸ್ನಲ್ಲಿ ವಿದ್ಯುತ್ ಕಟ್ ಆಗಿದ್ದರಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಬುಧವಾರ ರಾತ್ರಿ ವಿಮ್ಸ್ನಲ್ಲಿ ಮೃತಪಟ್ಟಿರುವ ಮನೋಜ್ ಕುಮಾರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಜೋಳದರಾಶಿ ಗ್ರಾಮದ ಮನೋಜ್ ಕುಮಾರ್(19) ಅವರಿಗೆ ಇದೇ ತಿಂಗಳ 6ರಂದು ಚೇಳು ಕಚ್ಚಿತ್ತು. ಹೀಗಾಗಿ ಮನೋಜ್ನನ್ನು ಚಿಕಿತ್ಸೆಗಾಗಿ ವಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ ರಾತ್ರಿ ತಮಗೆ ಮಾಹಿತಿ ಇಲ್ಲದೇ ಬೇರೊಂದು ವಾರ್ಡ್ಗೆ ಶಿಫ್ಟ್ ಮಾಡಿದ್ದಾರೆ. ನಮ್ಮನ್ನೂ ಒಳಗಡೆ ಬಿಟ್ಟಿರಲಿಲ್ಲ, ನಮಗೆ ರಾತ್ರಿ 10 ಗಂಟೆಗೆ ಮನೋಜ್ ಸಾವಿಗೀಡಾರುವ ಬಗ್ಗೆ ತಿಳಿಸಿದ್ದಾರೆ ಎಂದು ಮೃತ ಮನೋಜ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ: ಗಣಿನಾಡು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಟ್ಟಮ್ಮ (30), ಹಾಗೂ ಮೌಲಾಹುಸೇನ್ (38) ಚಂದ್ರಮ್ಮ (65) ಮೂವರು ಏಕಾಏಕಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆಸ್ಪತ್ರೆಯಲ್ಲಿ ಐಸಿಯುಗೆ ಪೂರೈಕೆ ಆಗುತ್ತಿದ್ದ ವಿದ್ಯುತ್ ಕಡಿತವೇ ಈ ಸಾವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ವಿಮ್ಸ್ ಆಸ್ಪತ್ರೆಯಲ್ಲಿ ಇದೇ ತಿಂಗಳು 12 ರಂದು ವಿದ್ಯುತ್ ಸಂಪರ್ಕ ಕಡಿತವಾಗಿತ್ತಂತೆ. 3-4 ತಾಸು ಕಳೆದರೂ ವಿದ್ಯುತ್ ಬಂದಿರಲಿಲ್ಲವಂತೆ. ಐಸಿಯು ವಾರ್ಡ್ನಲ್ಲಿದ್ದ ಮೂವರು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಇದೇ ವೇಳೆ ಮನೋಜ್ ಎನ್ನುವ ಯುವಕ ಕೂಡ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಈಗ ಹೊರಗೆ ಬಂದಿದೆ.
ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ ಆಸ್ಪತ್ರೆ ಆಡಳಿತ ಮಂಡಳಿ: ಆದರೆ, ಇದಕ್ಕೆ ವಿಮ್ಸ್ ಆಡಳಿತ ಮಂಡಳಿ ಸ್ಪಷ್ಟನೆ ಕೊಟ್ಟಿದೆ. ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದೆ. ಆರೋಪಗಳು ಕೇಳಿ ಬಂದಿರುವಂತೆ ವಿದ್ಯುತ್ ಸಮಸ್ಯೆಯಿಂದಾದ ಸಾವುಗಳಲ್ಲ ಎಂದು ವಿಮ್ಸ್ ಸೂಪರಿಂಟೆಂಡೆಂಟ್ ಯೋಗೇಶ್ ಹೇಳಿದ್ದಾರೆ.
ಅಂದು ಆಸ್ಪತ್ರೆಯಲ್ಲಿ ಕರೆಂಟ್ ಹೋಗಿರೋದು ನಿಜ. ಆದರೆ ಕರೆಂಟ್ ಹೋದ ಮೇಲೂ ವೆಂಟಿಲೇಟರ್ ಸಪ್ಲೈ ಇತ್ತು. ಪಕ್ಕದ ಬೆಡ್‌ಗಳಲ್ಲಿ ಹಲವು ರೋಗಿಗಳಿದ್ದರು. ಅವರಿಗೆ ಯಾವುದೇ ತೊಂದರೆ ಆಗಿಲ್ಲ. ರೋಗಿ ಸಂಬಂಧಿಕರು ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಯೋಗೇಶ್ ಹೇಳಿದ್ದಾರೆ.
ಪ್ರಕರಣದ ತನಿಖೆಗೆ ಆದೇಶಿಸಿದ ಸರ್ಕಾರ: ಈ ದುರಂತದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತುಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ತನಿಖೆಗೆ ಆದೇಶ ಮಾಡಿದ್ದಾರೆ. ಡಾ ಸ್ಮಿತಾ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸದನದಲ್ಲೂ ಪ್ರತಿಧ್ವನಿಸಿದ ಪ್ರಕರಣ: ಈ ನಡುವೆ ವಿಮ್ಸ್ನಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ಸಾವಿಗೆ ಸರ್ಕಾರವೇ ಕಾರಣ ಎಂದು ಅವರು ಆರೋಪಿಸಿದರು. ಈ ವೇಳೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಶವ ಪತ್ತೆ; ಅತ್ಯಾಚಾರವೆಸಗಿ ಕೊಲೆ ಶಂಕೆ