ಬಳ್ಳಾರಿ: ಆಸ್ತಿ ವಿವಾದದ ಹಿನ್ನೆಲೆ ಅಳಿಯನೇ ಮಾವನನ್ನು ಕ್ರೂರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದ ಜಮೀನಿನಲ್ಲಿ ನಡೆದಿದೆ.
ಬಂಡ್ರಾಳು ಗ್ರಾಮದ ನಿವಾಸಿ ವಿರೂಪಾಕ್ಷಗೌಡ (48) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಷಯವಾಗಿ ವಿರೂಪಾಕ್ಷಗೌಡ ಹಾಗೂ ಈತನ ಸಹೋದರಿ ನಡುವೆ ಮೊದಲಿನಿಂದಲೂ ವಿವಾದ ಇತ್ತು ಎನ್ನಲಾಗಿದೆ. ಆ ಒಳಜಗಳ ನಿನ್ನೆ ದಿನ ತಾರಕಕ್ಕೇರಿದ್ದು, ವಿರೂಪಾಕ್ಷಗೌಡ ಸಹೋದರಿಯ ಮಗನೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಾವನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿ ನಂತರ ಸಿರುಗುಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿನ ಸಿಪಿಐ ನೇತೃತ್ವದ ಸಿಬ್ಬಂದಿ ಕೂಡಲೇ ಬಂಡ್ರಾಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.