ಬಳ್ಳಾರಿ: ಜಿಲ್ಲೆಯ ಶ್ರೀರಾಂಪುರ ಕಾಲೋನಿಯಲ್ಲಿ ಕಳೆದ ಒಂದು ವಾರದ ಹಿಂದೆಯಷ್ಟೇ, ಮಹಾನಗರ ಪಾಲಿಕೆ ಪೌರ ಕಾರ್ಮಿಕ ನಾರಾಯಣಪ್ಪ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಮಗಳ ಮದುವೆ ಹಿನ್ನೆಲೆ ನಾರಾಯಣಪ್ಪ ಕುಟುಂಬ ಕೊಪ್ಪಳ ಜಿಲ್ಲೆಯ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ದೇವಸ್ಥಾನದಿಂದ ವಾಪಸ್ ಮನೆಗೆ ಬರುವಷ್ಟರಲ್ಲಿ 110 ಗ್ರಾಂ ಬಂಗಾರ, 715 ಗ್ರಾಂ ಬೆಳ್ಳಿ ಸೇರಿದಂತೆ ನಗದು ಕಳ್ಳತನವಾಗಿತ್ತು.
ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕೂಡ ನಾರಾಯಣಪ್ಪ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು. ಜೊತೆಗೆ ಪ್ರಕರಣ ಕೂಡಲೇ ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದ್ರಿಂದ ಕಾರ್ಯಪ್ರವೃತರಾದ ಪೊಲೀಸರು ಮೂರು ತನಿಖಾ ತಂಡಗಳನ್ನ ರಚನೆ ಮಾಡಿದ್ದರು. ಅನುಮಾನವಿದ್ದ ಹಿನ್ನೆಲೆ ಅದೇ ಏರಿಯಾದಲ್ಲಿ ವಾಸವಿದ್ದ ಭಾಸ್ಕರ್, ಪೆದ್ದಕ್ಕ ಅನ್ನೋ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಕಳ್ಳತನ ಮಾಡಿರುವ ಬಗ್ಗೆ ಈ ದಂಪತಿ ಬಾಯ್ಬಿಟ್ಟಿದ್ದಾರೆ. ಜೊತೆಗೆ ಬಸ್ನಲ್ಲಿ ಮತ್ತೊಂದು ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಧಿತರಾಗಿರುವ ಇಬ್ಬರೂ ಕಿಲಾಡಿ ಜೋಡಿ ಅನ್ನೋದು ಗೊತ್ತಾಗಿದೆ. ಭಾಸ್ಕರ್ ಹಾಗೂ ಪೆದ್ದಕ್ಕ ದಂಪತಿ ಬಳ್ಳಾರಿ ನಗರದಲ್ಲಿ ಆಗಾಗ ಏರಿಯಾಗಳನ್ನು ಬದಲಾವಣೆ ಮಾಡುತ್ತಲೇ ಇದ್ದಾರೆ. ಏರಿಯಾದಲ್ಲಿ ಯಾವುದಾದ್ರೂ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಅಂತಹ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು.
ಇದನ್ನೂ ಓದಿ: ದೇವರ ದರ್ಶನಕ್ಕೆ ತೆರಳಿದ್ದಾಗ ಮನೆಗೆ ಕನ್ನ: ಕಳ್ಳರ ಪಾಲಾಯ್ತು ಮದುವೆಗೆ ಖರೀದಿಸಿಟ್ಟಿದ್ದ ಚಿನ್ನ
ಕಳೆದ ಹಲವು ವರ್ಷಗಳಿಂದಲೂ ಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿರುವ ಈ ದಂಪತಿ ಇದುವರೆಗೆ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ ಇದುವರೆಗೆ ತಲೆಮರೆಸಿಕೊಂಡಿದ್ದ, ಈ ದಂಪತಿ ಕಳೆದ ವಾರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಈಗ ಅಂದರ್ ಆಗಿ ಜೈಲು ಸೇರಿದ್ದಾರೆ. ಕಳ್ಳತನವಾಗಿರುವ ಬಂಗಾರ, ಬೆಳ್ಳಿ, ನಗದು ವಾಪಸ್ ಸಿಕ್ಕಿರುವುದು ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈಗ ಸಂತಸ ತಂದಿದೆ.