ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಾರಹುಣ್ಣಿಮೆ ಸಂಭ್ರಮಕ್ಕೆ ಈ ದಿನ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಸಂಜೆಯೊತ್ತಿಗೆ ಜೋಡೆತ್ತುಗಳ ಮೆರವಣಿಗೆಗೆ ಸಕಲ ತಯಾರಿ ನಡೆದಿದೆ.
ಈ ದಿನ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಲ್ಲಿನ ಜೋಡೆತ್ತುಗಳಿಗೆ ರೈತರು ಬೆಳ್ಳಂಬೆಳಿಗ್ಗೆ ಸ್ನಾನ ಮಾಡಿಸಿ, ಬಳಿಕ ಜೋಡೆತ್ತುಗಳಿಗೆ ವರ್ಣರಂಜಿತ ಬಣ್ಣ ಬಳಿಯಲಾಗುತ್ತೆ. ಮಧ್ಯಾಹ್ನ 3 ರಿಂದ ಸಂಜೆ 6 ರೊಳಗೆ ಆಯಾ ಗ್ರಾಮಗಳ ಊರ ಬಾಗಿಲ ಬಳಿ ಜೋಡೆತ್ತುಗಳ ಮೆರವಣಿಗೆಗೆ ಮಾಡಲಾಗುತ್ತೆ. ಆ ಮೆರವಣಿಗೆಯಲ್ಲಿ ಮೊದಲು ಓಡೋಡಿ ಬಂದ ಜೋಡೆತ್ತುಗಳನ್ನು ವಿಶೇಷವಾಗಿ ಪರಿಗಣಿಸಿ ಮೆರವಣಿಗೆ ಮಾಡಿ ಸಂಭ್ರಮಿಸಲಾಗುತ್ತೆ.
ಮಹಾಮಾರಿ ಕೊರೊನಾ ಎರಡನೇ ಅಲೆಯ ಅಬ್ಬರ ಗ್ರಾಮೀಣ ಭಾಗದಲ್ಲಿ ಜೋರಾಗಿದ್ದು, ಈ ಬಾರಿ ಕಾರಹುಣ್ಣಿಮೆ ಸಂಭ್ರಮಕ್ಕೆ ಕೆಲವೆಡೆ ಜೋರಾಗಿ ತಯಾರಿ ನಡಿಯುತ್ತಿದೆ. ಮತ್ತೊಂದೆಡೆ ಸೂತಕದ ಕರಿಛಾಯೆ ಕೂಡ ಆವರಿಸಿದಂತಿದೆ. ಬಳ್ಳಾರಿ ಮಹಾನಗರದಿಂದ ಅಣತಿ ದೂರದಲ್ಲಿ ಇರುವ ಬೇವಿನಹಳ್ಳಿ ಗ್ರಾಮದಲ್ಲಿಂದು ಜೋಡೆತ್ತುಗಳ ಸ್ನಾನ ಮಾಡಿಸೋ ಕಾರ್ಯ ಜೋರಾಗಿದೆ. ಈ ವರ್ಷ ಮದುವೆಯಾದ ಮನೆಗಳಲ್ಲಿ ಮಾತ್ರ ಈ ಕಾರಹುಣ್ಣಿಮೆ ಸಂಭ್ರಮ ಇರಲ್ಲ. ಉಳಿದಂತೆ ಸಂಭ್ರಮ ಮಾತ್ರ ಜೋರಾಗಿರುತ್ತೆ. ಯಾಕಂದ್ರೆ, ಮದುವೆಯಾದ ಮನೆಗಳಲ್ಲಿ ಮೂರು ವರ್ಷಗಳ ಕಾಲ ಅಥವಾ ವರ್ಷದ ಅವಧಿಗೆ ಜೋಡೆತ್ತುಗಳ ಅಲಂಕಾರ ಮಾಡುವ ಹಾಗೆ ಇಲ್ಲ ಎಂಬ ಅಪಾರವಾದ ನಂಬಿಕೆ ಹಾಗೂ ಮೌಢ್ಯಾಚರಣೆ ಕೂಡ ಇಲ್ಲಿ ಜೀವಂತವಾಗಿದೆ. ಹೀಗಾಗಿ, ಜೋಡೆತ್ತುಗಳ ಅಲಂಕಾರ, ಮೆರವಣಿಗೆ ಮಾತ್ರ ಮದುವೆ ಮನೆಗಳಲ್ಲಿ ಇರಲ್ಲ ಅಂತಾರೆ ಯುವ ರೈತ ಟಿ.ರುದ್ರಗೌಡ.
ಹೋಳಿಗೆ ಊಟ ಸವಿಯೋ ಹಳ್ಳಿಜನ:
‘ಈ ಕಾರಹುಣ್ಣಿಮೆ ನಿಮಿತ್ತ ಜೋಡೆತ್ತುಗಳ ಮೆರವಣಿಗೆ ಒಂದು ರೀತಿ ಹಬ್ಬದ ಸಂಭ್ರಮ ಇರುತ್ತೆ. ಇಡೀ ದಿನವೇ ಆಯಾ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೋಳಿಗೆ ಊಟದ ಭೋಜನ ತಯಾರಾಗಿರುತ್ತೆ. ಎಲ್ಲರೂ ಹೋಳಿಗೆ ಊಟ ಸವಿದು ಕಾರ ಹುಣ್ಣಿಮೆಯನ್ನು ಸಂಭ್ರಮಿಸುತ್ತಾರೆ.
ಮುಂಗಾರು ಆರಂಭದ ಮೊದಲ ಸಂಭ್ರಮ ಇದು:
ಮುಂಗಾರು ಹಂಗಾಮು ಆರಂಭದ ಮೊದಲನೇಯ ಸಂಭ್ರಮವಾಗಿ ಈ ಕಾರ ಹುಣ್ಣಿಮೆ ಹೊರಹೊಮ್ಮುತ್ತೆ. ಜೋಡೆತ್ತುಗಳ ಅಲಂಕಾರ, ಮೆರವಣಿಗೆ ಹಾಗೂ ವಿಶೇಷ ಪೂಜೆಯೇ ಈ ಹುಣ್ಣಿಮೆಯ ವಿಶೇಷ ಆಗಿರುತ್ತೆ. ವರ್ಷಪೂರ್ತಿ ದುಡಿದು ದಣಿಯುವ ಜೋಡೆತ್ತುಗಳಿಗೆ ಈ ದಿನ ರೈತರು ಆತಿಥ್ಯವನ್ನು ನೀಡಲಿದ್ದಾರೆ. ಈ ದಿನವೆಲ್ಲಾ ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುತ್ತೆ. ಮನೆಯ ಮಕ್ಕಳಂತೆ ಜೋಪಾನ ಮಾಡೋ ಕಾರ್ಯವು ಇಲ್ಲಿ ನಡೆಯುತ್ತೆ.