ವಿಜಯನಗರ : ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ನಿನ್ನೆ ಚಾಲನೆ ನೀಡಲಾಗಿತ್ತು. ಎರಡನೇ ದಿನವಾದ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೊಸಪೇಟೆಗೆ ಆಗಮಿಸಿದ್ದರು. ಬಳ್ಳಾರಿ ಜಿಲ್ಲೆಯ ತೋರಣಗಲ್ ಜಿಂದಾಲ್ ಏರ್ ಸ್ಟ್ರಿಪ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಂದಿಳಿದಿದ್ದಾರೆ. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಮುಖಂಡರು ಬರಮಾಡಿಕೊಂಡಿದ್ದಾರೆ.
ರಾಜ್ಯದ ಬಿಜೆಪಿ ಶಾಸಕರು, ಸಚಿವರು ಸೇರಿದಂತೆ 650 ಜನ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ರೀತಿ ನೀಲನಕ್ಷೆ ತಯಾರಾಗಬೇಕು ಎಂಬುದರ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚಾಗಿ ಕಳೆದ ಬಾರಿ ಮುಖ್ಯಮಂತ್ರಿ ದೆಹಲಿ ಪ್ರವಾಸ ಕೈಗೊಂಡಾಗ ಜೆ ಪಿ ನಡ್ಡಾ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾರ್ಯಕಾರಿಣಿ ಸಭೆಯ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕಳುಹಿಸಿದ್ದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಇಲ್ಲಿ ಚರ್ಚೆಯಾಗುವುದು ಬಹುತೇಕ ಸತ್ಯ. ಹಾಗಾಗಿ, ಹೆಚ್ಚಿನ ಸಚಿವರು, ಆಕಾಂಕ್ಷಿಗಳು ಕುತೂಹಲದಲ್ಲಿದ್ದಾರೆ. ಈಗಾಗಲೇ ಜೆ ಪಿ ನಡ್ಡಾ ಕೂಡ ಹೊಸಪೇಟೆಗೆ ಆಗಮಿಸಿದ್ದಾರೆ. ಈ ಕುತೂಹಲಗಳಿಗೆ ಜೆ ಪಿ ನಡ್ಡಾ ತೆರೆ ಎಳೆಯುತ್ತಾರೆಯೇ ಅಥವಾ ಎಲ್ಲರಲ್ಲೂ ಮತ್ತದೇ ಕುತೂಹಲವನ್ನು, ಮತ್ತೊಂದಷ್ಟು ಪ್ರಶ್ನೆಗಳನ್ನು ಸೃಷ್ಟಿಸಿ ತೆರಳುತ್ತಾರಾ ಎಂಬುದನ್ನು ಕಾದು ನೊಡಬೇಕಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ : ಮುಂದಿನ ವಿಧಾನಸಭಾ ಚುನಾವಣೆಗೆ ನೀಲನಕ್ಷೆ!?