ಬಳ್ಳಾರಿ: ಜಿಂದಾಲ್, ನೌಕರರನ್ನು ಬಲವಂತವಾಗಿ ರಾಜೀನಾಮೆ ನೀಡಿ ಎಂದು ಒತ್ತಾಯ ಮಾಡುವುದು ಮತ್ತು ನೌಕರಿಯಿಂದ ತೆಗೆಯ ಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಬಳ್ಳಾರಿ ಜಿಲ್ಲಾ ಅಖಿಲ ಪಕ್ಷಗಳ ಹೋರಾಟ ಸಮಿತಿ ಸದಸ್ಯರು ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಳ್ಳಾರಿ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಕೋವಿಡ್ ಕೇಸ್ಗಳ ಸಂಖ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು, ಹಾಗೂ ಜಿಂದಾಲ್ ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದವರನ್ನು ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಂದಾಲ್ ಕೈಗಾರಿಕೆಯಿಂದ ಕಾರ್ಮಿಕರನ್ನು ತೆಗೆದುಹಾಕಿದ್ದರೆ ಅವರ ಹೆಸರು ಪಟ್ಟಿ ಮಾಡಿ ಕೊಡಿ. ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಲು ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.
ಹಕ್ಕೊತ್ತಾಯಗಳು :
1. ಕೋವಿಡ್ -19 ಜಿಲ್ಲಾದ್ಯಂತ ಹರಡಿದೆ ಅದಕ್ಕೆ ಕಾರಣವಾದ ಜಿಂದಾಲ್ ಕಂಪನಿ ಜೆ.ಎಸ್.ಡಬ್ಲ್ಯೂ ಆಡಳಿತ ಮಂಡಳಿಯ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಿ ನಿರ್ಬಂಧಿಸಿಬೇಕು.
2. ಕೋವಿಡ್-19 ಸೋಂಕಿನ ಕಾರಣದಿಂದ ಜಿಲ್ಲೆಯಲ್ಲಿ ಸಾವಿಗೀಡಾದ ನಾಗರಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
3. ಜಿಂದಾಲ್ ಕಂಪನಿಯ ಕಾರ್ಮಿಕರು ಅವರ ಕುಟುಂಬದ ಸದಸ್ಯರು, ಅಲ್ಲಿ ವಾಸ ಮಾಡುವ ಜನರಿಗೆ 10 ಲಕ್ಷ ರೂಪಾಯಿ ಪರಿಹಾರ ಅಗತ್ಯ
4. ಕಂಪನಿ ಒತ್ತಾಯ ಪೂರ್ವಕವಾಗಿ ಉದ್ಯೋಗ ಭದ್ರತೆಗೆ ಬೆದರಿಕೆ ಒಡ್ಡಿ ಬಲವಂತವಾಗಿ ಕಾರ್ಮಿಕರನ್ನು ದುಡಿಸಿಕೊಳ್ಳುವುದನ್ನು ನಿಲ್ಲಿಸಬೇಕು.
5. ಯಾವುದೇ ಕಾರಣಕ್ಕೂ ಈ ಭಾಗದ ನೌಕರರನ್ನು ಬಲವಂತವಾಗಿ, ಬೆದರಿಕೆ ಹಾಕಿ ರಾಜೀನಾಮೆ ನೀಡಿ ಎಂದು ಒತ್ತಾಯ ಮಾಡಬಾರದು ಹಾಗೂ ನೌಕರಿಯಿಂದ ತೆಗೆಯಬಾರದು.
ಈ ಸಮಯದಲ್ಲಿ ಬಿಜೆಪಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜೆ.ಡಿ.ಎಸ್ ಮುಖಂಡ ಎನ್. ಪ್ರತಾಪ್ ರೆಡ್ಡಿ, ಕಾಂಗ್ರೆಸ್ ಮುಖಂಡ ಹುಮಾಯಾನ್ ಖಾನ್, ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ್, ಸತ್ಯ ಬಾಬು, ವಿ.ಎಸ್ ಶಿವಶಂಕರ್, ಡಿ.ವಿಜಯ್ ಕುಮಾರ್ ಇನ್ನಿತರರು ಹಾಜರಿದ್ದರು.