ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಪರ್ಯಾಯ ಬೆಳೆ ಬೆಳೆಯುವಂಥ ಸನ್ನಿವೇಶ ನಿರ್ಮಾಣವೇ ಆಗಿಲ್ಲ. ಕಳೆದ 20 ವರ್ಷಗಳಿಂದ ಪ್ರತಿ ಅಗಸ್ಟ್ ತಿಂಗಳ 15ರೊಳಗೆ ತುಂಗಭದ್ರೆಯ ಒಡಲಾಳ ತುಂಬಿಕೊಂಡು ಬೋರ್ಗರೆಯುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಕೃಷಿ ಇಲಾಖೆ ತಿಳಿಸಿದೆ.
ಭತ್ತದ ಬೆಳೆ ಬಿಟ್ರೇ ಪರ್ಯಾಯ ಬೆಳೆಯತ್ತ ಮುಖ ಮಾಡುವ ಸನ್ನಿವೇಶವು ಈ ಜಿಲ್ಲೆಯ ರೈತರಲ್ಲಿ ನಿರ್ಮಾಣವಾಗಿಲ್ಲ ಎಂದು ಕೃಷಿ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. ಪ್ರತಿವರ್ಷ ಜೂನ್, ಜುಲೈ, ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮುಂಗಾರು ಹಂಗಾಮಿನ ಮಳೆ ಸುರಿಯೋದು ವಾಡಿಕೆಯಾಗಿದೆ. ಜಿಲ್ಲೆಯಲ್ಲಿ ಸತತ ನಾಲ್ಕಾರು ವರ್ಷಗಳಿಂದ ಭೀಕರ ಬರದ ಕರಿಛಾಯೆ ಆವರಿಸಿದೆ. ಆದರೆ, ಮಲೆನಾಡಿನ ಪ್ರದೇಶದಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ತುಂಬಿ ತುಳುಕುತ್ತಿದೆ. ಹಾಗಾಗಿ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಯನ್ನು ಜಿಲ್ಲೆಯ ಸಿರುಗುಪ್ಪ, ಹೊಸಪೇಟೆ, ಕುರುಗೋಡು, ಕಂಪ್ಲಿ ಹಾಗೂ ಬಳ್ಳಾರಿ ತಾಲೂಕಿನ ರೈತರು ಬೆಳೆಯುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲೇ ಸಮರ್ಪಕ ಮಳೆ ಸುರಿಯದಿದ್ದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಕೃಷಿ ಇಲಾಖೆಯ ಆದೇಶವನ್ನು ಗಣಿ ಜಿಲ್ಲೆಯ ರೈತರು ಧಿಕ್ಕರಿಸಿದ್ದಾರೆ.
ಜಿಲ್ಲೆಯಾದ್ಯಂತ ವಾಡಿಕೆಯ ಮಳೆ ಸುರಿದಿಲ್ಲ. ಜೂನ್ ತಿಂಗಳಲ್ಲಿ ಮಳೆಯ ಕೊರತೆ ಕಂಡು ಬಂದಿದೆ. ಜುಲೈ ತಿಂಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ತಿಳಿಸಿದ್ದಾರೆ. ಈ ಮುಂಗಾರು ಹಂಗಾಮಿಗೆ ಅಂದಾಜು 592 ಮಿ. ಮೀಟರ್ನಷ್ಟು ಮಳೆಯಾಗುವ ಸಾಧ್ಯತೆಯಿತ್ತು. ಆ ಪೈಕಿ 218 ವಾಡಿಕೆ ಮಳೆಯಾಗಬೇಕಿತ್ತು. ಸದ್ಯ ಕೇವಲ 152 ಮಿಲಿ ಮೀಟರ್ನಷ್ಟು ಮಳೆಯಾಗಿದ್ದು, 30 ಮಿಲಿಮೀಟರ್ನಷ್ಟು ಕಡಿಮೆ ಮಳೆಯಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೇ, ಜಿಲ್ಲೆಯಾದ್ಯಂತ ಸರಿ ಸುಮಾರು 4.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೀಗ ಅಂದಾಜು 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಅಂದರೆ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದೆ. ಇನ್ನುಳಿದ ಶೇ.70ರಷ್ಟು ಬಿತ್ತನೆ ಕಾರ್ಯಕ್ಕೆ ತಯಾರಿ ನಡೆದೇ ಇಲ್ಲ. ಅಗಸ್ಟ್ 15ರೊಳಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಅದು ತುಂಗಭದ್ರಾ ಜಲಾಶಯ ಭರ್ತಿಯಾದ್ರೆ ಮಾತ್ರ ಈ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ. ಒಂದು ವೇಳೆ ತುಂಗಭದ್ರಾ ಜಲಾಶಯ ಭರ್ತಿಯಾಗದೇ ಹೋದರೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಜಿಲ್ಲೆಯ ರೈತರು ಮುಂದಾಗಬೇಕಿದೆ. ಈಗಾಗಲೇ ಪರ್ಯಾಯ ಬೆಳೆ ಬೆಳೆಗಳಿಗೆ ಬೇಕಾಗುವ ಬೀಜ ಹಾಗೂ ರಸಗೊಬ್ಬರವನ್ನು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದರು.
ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ, ಕಂಪ್ಲಿ ಹಾಗೂ ಕುರುಗೋಡು ತಾಲೂಕಿನಲ್ಲಿ 75,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತನಾಟಿ ಮಾಡುವ ಗುರಿ ಹೊಂದಿದ್ದು, ಆದರೀಗ ಕೇವಲ 2,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡ್ಲಾಗಿದೆ. ಉಳಿದ ಕಡೆಗಳಲ್ಲಿ ಅಗಸ್ಟ್ ತಿಂಗಳವರೆಗೆ ಕಾದುನೋಡಿ ಪರ್ಯಾಯ ಬೆಳೆಯನ್ನು ಬೆಳೆಯುವ ನಿರ್ಧಾರಕ್ಕೆ ರೈತರು ಬಂದಿದ್ದಾರೆ.