ಬಳ್ಳಾರಿ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಶಾಸಕ ಬಿ.ಶ್ರೀರಾಮುಲು ಕಣಕ್ಕಿಳಿಯಲಿದ್ದಾರೆಂಬ ಊಹಾಪೋಹದ ಸುದ್ದಿಗೆ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವೆ ಎನ್ನುವ ಮುಖೇನ ಶ್ರೀರಾಮುಲು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿನ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿಂದು ನಡೆದ ಲೋಕಸಭಾ ಚುನಾವಣಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಬಿಜೆಪಿ ವರಿಷ್ಠರ ತೀರ್ಮಾನದಂತೆ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವೆ ಎಂದರು.
ಬೆಳಿಗ್ಗೆಯೇ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿ ಶುದ್ಧ ಸುಳ್ಳು. ನಾನ್ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ. ಅದರ ಅಗತ್ಯತೆಯೂ ನನಗಿಲ್ಲ. ಇವೆಲ್ಲ ಗಾಳಿ ಸುದ್ದಿ. ಅದಕ್ಕೆ ಯಾರು ಕಿವಿಗೊಡಬಾರದು. ಸದ್ಯ ವರಿಷ್ಠರ ತೀರ್ಮಾನದಂತೆಯೇ ನಾನು ಮುನ್ನಡೆಯುವೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುವೆ. ಈ ರೀತಿಯ ಊಹಾಪೋಹದ ಸುದ್ದಿಯನ್ನ ಯಾರು ಹಬ್ಬಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.