ವಿಜಯನಗರ: ಜಿಲ್ಲಾ ಕೇಂದ್ರವಾಗಿ ಹೊಸಪೇಟೆ ಘೋಷಣೆಯಾಗಿದ್ದೇ ತಡ, ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಹೀಗಾಗಿ, ಸರ್ಕಾರಿ ಭೂಮಿ ಕಬಳಿಕೆ ಪ್ರಕರಣಗಳು ಸಹ ಹೆಚ್ಚಾಗಿವೆ. ಸರ್ಕಾರಿ ಭೂಮಿ ಕಬಳಿಸಿ, ದಾಖಲಾತಿ ತಿದ್ದಿ ಮಾರಾಟ ಮಾಡಿದ್ದ ಆರೋಪದಡಿ ನಗರಸಭೆಯ ಮಾಜಿ ಸದಸ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಹೊಸಪೇಟೆ ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ್ ಬಂಧಿತ ಆರೋಪಿ. ಇವರು ತಮ್ಮ ಪ್ರಭಾವ ಬಳಸಿ ಸರ್ಕಾರಿ ಜಾಗ ಕಬಳಿಸಿ, ದಾಖಲಾತಿ ತಿದ್ದುಪಡಿ ಮಾಡುವುದನ್ನೇ ತಮ್ಮ ಕಾಯಕವಾಗಿಸಿಕೊಂಡಿದ್ದರು ಎನ್ನಲಾಗ್ತಿದೆ. ಜಾಗ ವಂಚನೆಗೆ ಸಂಬಂಧಿಸಿದಂತೆ ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ್ ಹಾಗೂ ಅವರ ಪತ್ನಿ ಎಲ್. ಭಾಗ್ಯ ಡಿ. ವೇಣುಗೋಪಾಲ್ ವಿರುದ್ಧ ನಗರಪಟ್ಟಣ ಪೊಲೀಸ್ ಠಾಣೆಯಲ್ಲಿ ಆ. 27ರಂದು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ ಆರೋಪ: ಇಬ್ಬರ ನಡುವೆ ಹೊಡೆದಾಟ- ವಿಡಿಯೋ
ರಾಣಿಪೇಟೆಯ ಸಂತೋಷ್ ಕುದುರೆ ಮೇಟಿ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಪಟ್ಟಣ ಠಾಣೆ ಪೊಲೀಸರು ತನಿಖೆ ನಡೆಸಿ ಶುಕ್ರವಾರ ಸಂಜೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ?: ವೇಣುಗೋಪಾಲ್ ನಗರದ ಸಿರಸನಕಲ್ಲು ಪ್ರದೇಶದಲ್ಲಿ ಭೂ ಕಬಳಿಕೆ ಮಾಡಿ ಸಂತೋಷ್ ಕುದುರೆ ಮೇಟಿ ಎನ್ನುವವರಿಗೆ 16,28,000 ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಇದಕ್ಕೆ ಸಂದಬೇಕಾದ ಹಣವನ್ನು ಬ್ಯಾಂಕ್ ಮೂಲಕ ಸ್ವೀಕರಿಸಿದ್ದರು. ಬಳಿಕ ಇದು ನಕಲಿ ಡಾಕ್ಯುಮೆಂಟ್ ಎಂದು ಗೊತ್ತಾಗಿದ್ದು, ಸಂತೋಷ್ ಜಾಗದ ಬಗ್ಗೆ ವಿಚಾರಿಸಿದ್ದಾರೆ. ಆಗ ಸರ್ಕಾರಿ ಜಾಗ ಅನ್ನೋದು ತಿಳಿದುಬಂದಿದೆ. ನಂತರ ಹೊಸಪೇಟೆ ನಗರ ಠಾಣೆಯಲ್ಲಿ ಚೀಟಿಂಗ್ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಭೂಮಿ ಅತಿಕ್ರಮ - ರಾಜ್ಯದಲ್ಲಿವೆ ಹಲವು ಪ್ರಕರಣಗಳು!