ಬಳ್ಳಾರಿ: ಹೂವಿನಹಡಗಲಿ ತಾಲೂಕಿನಾದ್ಯಂತ ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆ ಮಾಗಳ ಗ್ರಾಮದ
ಕಚ್ಚಾ ಮನೆಯ ಗೋಡೆ ಕುಸಿದು ಬಿದ್ದಿದೆ. ಕುಸಿದು ಬೀಳುವ ಮುನ್ಸೂಚನೆ ಹಿನ್ನೆಲೆ ಮನೆಯಲ್ಲಿದ್ದ ಎರಡು ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಮಾಗಳ ಗ್ರಾಮದ ಬನ್ನಿಮಟ್ಟಿ ತಿರುಕಪ್ಪ ಮತ್ತು ಬನ್ನಿಮಟ್ಟಿ ಬಸಪ್ಪ ಇವರಿಗೆ ಸೇರಿದ್ದ ಮನೆಯ ಗೋಡೆ ಮಳೆಗೆ ಕುಸಿದು ಬಿದ್ದಿದೆ.
ಮನೆಯಲ್ಲಿನ ಅಕ್ಕಿ, ಜೋಳ, ದಿನ ಬಳಕೆಯ ವಸ್ತುಗಳು, ಬಟ್ಟೆ ಸೇರಿದಂತೆ ಎಲ್ಲವೂ ಮಣ್ಣುಪಾಲಾಗಿವೆ. ಈ ಎರಡು ಕುಟುಂಬಗಳ ಸ್ಥಿತಿ ನೋಡಲಾಗದೆ ಪಕ್ಕದ ಮನೆಯವರು ಊಟ ತಿಂಡಿ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ. ಈ ಎರಡು ಕುಟುಂಬಗಳ ಸದಸ್ಯರು ಕೂಲಿ ಕಾರ್ಮಿಕರಾಗಿದ್ದಾರೆ. ನಿತ್ಯದ ದುಡಿಮೆಯಿಂದ ಬಂದ ಹಣದಲ್ಲಿ ಜೀವನ ಸಾಗಿಸುವಂತಹ ಸ್ಥಿತಿ ಇದೆ.
ಘಟನೆ ಕುರಿತು ಮಾತನಾಡಿದ ಕುಟುಂಬಸ್ಥರು, ನೋಡನೋಡುತ್ತಲೆ ಗೋಡೆ ಕುಸಿಯಲು ಆರಂಭಿಸಿತು. ಆ ಕ್ಷಣದಲ್ಲೇ ನಿದ್ದೆಯಲ್ಲಿದ್ದ ಮಕ್ಕಳನ್ನು ಎದೆಗೆ ಅವಚಿಕೊಂಡು ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದೇವೆ. ರಾತ್ರಿ ಮಲಗಿರುವ ಸಮಯದಲ್ಲಿ ಮನೆ ಬಿದ್ದಿದ್ದರೆ ಮನೆ ಮಂದಿಯೆಲ್ಲ ಮಣ್ಣುಪಾಲಾಗುತ್ತಿದ್ದೆವು. ಸದ್ಯ ನಮಗೆ ತಿನ್ನಲೂ ಏನಿಲ್ಲ ಎಂದು ಕಣ್ಣೀರು ಹಾಕುತ್ತಾ ಹೇಳಿದರು.