ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್‌ಸಿ ಮೀಸಲು ಕ್ಷೇತ್ರದಿಂದ ಬೇಡ ಜಂಗಮ ಅಭ್ಯರ್ಥಿ ಸ್ಪರ್ಧೆಗೆ ಧಾರವಾಡದ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಮಹಾನಗರ ಪಾಲಿಕೆಯ ಒಂದನೇಯ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿತ್ತು. ಈ ಕ್ಷೇತ್ರದಿಂದ ಹೆಚ್.ಎಂ.ಕಿರಣ ಕುಮಾರ ಎಂಬವರು ಬೇಡ ಜಂಗಮ ಜಾತಿ ಪ್ರಮಾಣ ಸಲ್ಲಿಸಿ ಸ್ಪರ್ಧಿಸಲು ಬಯಸಿದ್ದರು. ಮೊದಲಿಗೆ ಚುನಾವಣಾಧಿಕಾರಿ ಕಿರಣ ಕುಮಾರ ಅವರ ನಾಮಪತ್ರವನ್ನು ಅಂಗೀಕರಿಸಿ, ಬಳಿಕ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಕಿರಣ ಕುಮಾರ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಬಳ್ಳಾರಿ ಪಾಲಿಕೆ ಚುನಾವಣೆ: ಸದಸ್ಯರ ವಿರುದ್ಧ ಕೋವಿಡ್ ಕೇಸ್ ದಾಖಲು
ಮೊದಲು ನಾಮಪತ್ರ ಸ್ವೀಕೃತಗೊಂಡಾಗ ನನಗೆ ಸ್ವೀಕೃತ ಆಗಿರುವ ಮಾಹಿತಿಯನ್ನು ಚುನಾವಣಾಧಿಕಾರಿ ತಿಳಿಸಿದ್ದರು. ಆದರೆ, ನಾಮಪತ್ರ ತಿರಸ್ಕೃತಗೊಂಡಾಗ ಈ ಕುರಿತು ಮಾಹಿತಿ ನೀಡಿಲ್ಲ. ಇದು ನ್ಯಾಯಸಮ್ಮತ ತೀರ್ಮಾನ ಅಲ್ಲವೆಂದು ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿ, ಷರತ್ತು ಬದ್ಧ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಹೈಕೋರ್ಟ್ ಮಧ್ಯಂತರ ತೀರ್ಪಿನಂತೆ ಕಿರಣ ಕುಮಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಷ್ಟೆ. ಆದರೆ, ಫಲಿತಾಂಶ ತೀರ್ಪಿನ ಅನ್ವಯ ನಿರ್ಧಾರ ಆಗಲಿದೆ ಎಂದು ಕೋರ್ಟ್ ತಿಳಿಸಿದೆ.