ಹೊಸಪೇಟೆ (ವಿಜಯನಗರ): ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ ಶಿವಾಜಿ ನಾಯ್ಕ್ ಎಂಬುವರಿಂದ ವೃದ್ಧ ಶರಣಾ ನಾಯ್ಕ್ ಹಾಗೂ ಸಂಬಂಧಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ.
ದೂರು-ಪ್ರತಿ ದೂರು ದಾಖಲಾದ ಹಿನ್ನೆಲೆ ಎರಡೂ ಕಡೆಯವರಿಂದ ಆರು ಜನರನ್ನು ಬಂಧಿಸಲಾಗಿದೆ. ಇತ್ತ ಹಲ್ಲೆಗೊಳಗಾದ ಜಗದೀಶ್, ಆತನ ಪತ್ನಿ ಶ್ರೀದೇವಿ, ಸಹೋದರ ಶಿವಕುಮಾರ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಜೂನ್ 29 ರಂದು ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರ, ಪಿ.ಟಿ. ಶಿವಾಜಿನಾಯ್ಕ್ ರಿಂದ ಜಾಗದ ವಿಚಾರವಾಗಿ ವೃದ್ಧ ಶರಣಾನಾಯ್ಕ್ ಸಂಬಂಧಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು.
ಹಲ್ಲೆಗೊಳಗಾದ ಶರಣ ನಾಯ್ಕ್ ಸಂಬಂಧಿಕರಾದ ಶ್ರೀದೇವಿ ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. IPC 323, 324, 504, 506, 509 ಅಡಿಯಲ್ಲಿ FIR ದಾಖಲು ಮಾಡಲಾಗಿತ್ತು. ಶಿವಾಜಿ ನಾಯ್ಕ್ ಪತ್ನಿ ಕುಮಾರಿ ಬಾಯಿ ಪ್ರತಿದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬಾಲಕನನ್ನು ತಿಂದು ಹಾಕಿದ ಮೊಸಳೆ.. 10 ದಿನದೊಳಗೆ ಎರಡನೇ ಘಟನೆ !