ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವವನ್ನು ಜನವರಿ 10 ಮತ್ತು 11ರಂದು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಈ ಸಂಬಂಧ ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿ ಮಾತನಾಡಿ, ಮೈಸೂರು ದಸರಾದಂತೆ ಹಂಪಿ ಉತ್ಸವವನ್ನೂ ಅದ್ಧೂರಿಯಾಗಿ ಆಚರಿಸುವ ಪ್ರತೀತಿ ಇದೆ. ಹೀಗಾಗಿ, ಈ ಬಾರಿಯ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಸಹಕರಿಸುವಂತೆ ಮನವಿ ಮಾಡಿದರು.
ಜೇಬುಗಳ್ಳರ ಮೇಲೆ ನಿಗಾವಹಿಸಿ:
ಉತ್ಸವದ ಸಂದರ್ಭದಲ್ಲಿ ಜೇಬುಗಳ್ಳರ ಹಾವಳಿ ಜಾಸ್ತಿ ಇರುತ್ತದೆ. ಹೀಗಾಗಿ, ಜಿಲ್ಲಾ ಪೊಲೀಸ್ ಇಲಾಖೆಯು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ದೂರದ ಊರುಗಳಿಂದ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಗಬಾರದು. ಇದೊಂದು ಸಣ್ಣ ವಿಷಯವಾದ್ರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.