ವಿಜಯನಗರ: ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ಪೂರ್ವದಲ್ಲೇ ಹಂಪಿಯಲ್ಲಿ ತಾಯಿ ಭುವನೇಶ್ವರಿಯ ದೇಗುಲವಿತ್ತು ಎಂಬುದನ್ನು ಪೌರಾಣಿಕ ಹಾಗೂ ಚಾರಿತ್ರಿಕ ದಾಖಲೆಗಳು ಸಾರುತ್ತವೆ. ಕನ್ನಡಾಭಿಮಾನ ಮೂಡಿಸಲು ಹಂಪಿಯ ಭುವನೇಶ್ವರಿ ದೇವಿಯನ್ನು ನಾಡದೇವತೆಯೆಂದೇ ಸ್ವೀಕರಿಸಲಾಗಿದೆ. ಹಂಪಿಯೇ ತಾಯಿ ಭುವನೇಶ್ವರಿಯ ತವರು ಎಂದು ಹಲವು ದಾಖಲೆಗಳಿಂದ ಸಾಬೀತಾಗಿದೆ.
ಕನ್ನಡ ತಾಯಿಯನ್ನು ಭುವನೇಶ್ವರಿ ಎಂದೇ ಕರೆಯುವ ವಾಡಿಕೆ. ಈ 'ಭುವನೇಶ್ವರಿ'ಯ ಕಲ್ಪನೆ ಎಲ್ಲಿಂದ ಬಂತು? ನಮ್ಮ ನಾಡ ತಾಯಿ ಭುವನೇಶ್ವರಿಯೇ ಏಕೆ? ಈಕೆಯ ಮೂಲ ನೆಲೆ ಎಲ್ಲಿದೆ? ಎಂದು ಸಂಶೋಧಕರ ಶೋಧನೆಯಲ್ಲಿ ಹಂಪಿಯ ಶ್ರೀ ಭುವನೇಶ್ವರಿ ದೇವಿ ಹಾಗೂ ಪಂಪಾಂಬಿಕೆ ದೇಗುಲಗಳನ್ನು ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲೇ ನಿರ್ಮಿಸಲಾಗಿದೆ ಎಂಬುದನ್ನು ಜಾನಪದ, ಸಾಹಿತ್ಯ ಹಾಗೂ ಚಾರಿತ್ರಿಕ ದಾಖಲೆಗಳು ಸಾಕ್ಷೀಕರಿಸುತ್ತವೆ.
ತಾಯಿ ಭುವನೇಶ್ವರಿ ಕನ್ನಡದ ತಾಯಿ ಎಂಬ ನಂಬಿಕೆಯೊಂದಿಗೆ ಆಲೂರು ವೆಂಕಟರಾವ್ ನೇತೃತ್ವದಲ್ಲಿ ಸಾಹಿತಿಗಳು ಹಿಂದೊಮ್ಮೆ ಹಂಪಿಯಿಂದಲೇ ನಾಡು-ನುಡಿ ರಕ್ಷಣೆಯ ಹೋರಾಟ ಆರಂಭಿಸಿದ್ದರು. ಏಕೀಕರಣದ ಪೂರ್ವದಲ್ಲೇ ಕನ್ನಡಾಭಿಮಾನ ಎಲ್ಲೆಡೆ ಮೊಳಗಿಸಲು ಶಾಂತಕವಿಗಳು ಶ್ರೀ ವಿದ್ಯಾರಣ್ಯ ವಿಜಯ ಎಂಬ ಕೃತಿ ರಚಿಸಿದರು. ಈ ಕೃತಿ ಹಂಪಿ, ತಾಯಿ ಭುವನೇಶ್ವರಿ ಹಾಗೂ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೇ ಚಳವಳಿಗಾರ ದೊಡ್ಡಮೇಟಿ ಅಂದಾನಪ್ಪನವರು ಭುವನೇಶ್ವರಿ ಸ್ತುತಿ ರಚಿಸಿದರು. ಹಂಪಿಯೇ ತಾಯಿ ಭುವನೇಶ್ವರಿಯ ಮೂಲ ನೆಲೆ ಎಂಬುದನ್ನು ಸ್ಮರಿಸಲೆಂದೇ 1991-92ರಲ್ಲಿ ಹಂಪಿ ಕನ್ನಡ ವಿವಿಯನ್ನು ಸ್ಥಾಪಿಸಲಾಗಿದೆ. ಕನ್ನಡ ವಿವಿಯ ಪ್ರಾಧ್ಯಾಪಕರು ಹಾಗೂ ಸಂಶೋಧಕರು, ತಾಯಿ ಭುವನೇಶ್ವರಿ ಕುರಿತು ನಡೆಸಿದ ಹಲವು ಸಂಶೋಧನೆಗಳು ಗಮನಸೆಳೆಯುತ್ತವೆ.
ಭುವನೇಶ್ವರಿಗೆ ನಿತ್ಯ ಪೂಜೆ: ಹಂಪಿಯ ಶ್ರೀ ಪಂಪಾವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿರುವ ಕನ್ನಡದ ಮಾತೆ ಭುವನೇಶ್ವರಿ ದೇವಿಗೆ ನಿತ್ಯಪೂಜೆ ಸಲ್ಲಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವ, ನಾನಾ ಜಯಂತಿ ಸಂದರ್ಭಗಳಲ್ಲಿ ಜಿಲ್ಲೆ ಸೇರಿದಂತೆ ಬಳ್ಳಾರಿ, ಕೊಪ್ಪಳ ಸೇರಿ ಇತರೆ ಜಿಲ್ಲೆಗಳ ಸಂಘಟನೆಗಳು, ಇಲ್ಲಿಂದಲೇ ಜ್ಯೋತಿ ತೆಗೆದುಕೊಂಡು ಹೋಗುವ ಪರಿಪಾಠವಿದೆ. ಕನ್ನಡದ ಸಾಕ್ಷಿಪ್ರಜ್ಞೆಯಾಗಿ ತಾಯಿ ಭುವನೇಶ್ವರಿ ಹಂಪಿಯಲ್ಲಿ ನೆಲೆ ನಿಂತಿದ್ದಾಳೆ ಎನ್ನುತ್ತಾರೆ ಕನ್ನಡ ವಿವಿಯ ಸಂಶೋಧಕರು.
ಗ್ರಾಮದೇವತೆ: ಜಾನಪದ ಹಾಗೂ ಬುಡಕಟ್ಟು ಚರಿತ್ರೆಯಲ್ಲೂ ಭುವನೇಶ್ವರಿ ದೇವಿ ನಾನಾ ಹೆಸರಿನಿಂದ ಕರೆಯಿಸಿಕೊಂಡರೂ, ಶಕ್ತಿ ದೇವತೆಯೆಂದೇ ಪ್ರಸಿದ್ಧಿ. ಭುವನೇಶ್ವರಿ ದೇವಿಯನ್ನು ಗ್ರಾಮದೇವತೆಯಾಗಿ ಹಂಪಿಯಲ್ಲಿ ಪೂಜಿಸಲಾಗುತ್ತಿತ್ತು ಎಂಬ ನಿದರ್ಶನಗಳಿವೆ. ಹಂಪಿಯೇ ತಾಯಿ ಭುವನೇಶ್ವರಿ ದೇವಿಯ ಮೂಲ ನೆಲೆಯಾಗಿದೆ ಎಂದು ಜಾನಪದ, ಬುಡಕಟ್ಟು ಚರಿತ್ರೆಗಳು ಸಾಕ್ಷಿ ನುಡಿಯುತ್ತವೆ ಎಂಬುದು ಹಲವು ಸಂಶೋಧಕರ ಅಭಿಪ್ರಾಯ.
ಭುವನೇಶ್ವರಿ ತಾಯಿಯ ಪರಿಕಲ್ಪನೆ: ಆಲೂರ ವೆಂಕಟರಾಯರ 'ಕರ್ನಾಟಕ ಗತವೈಭವ' ಕೃತಿಯಿಂದ ಹಂಪಿಗೆ ವಿಶೇಷ ಮಹತ್ವ ಬಂತು. ಕರ್ನಾಟಕವನ್ನು ಒಂದುಗೂಡಿಸಲು ಭುವನೇಶ್ವರಿ ತಾಯಿಯ ಪರಿಕಲ್ಪನೆಯನ್ನು ಅವರು ಇನ್ನಷ್ಟು ಪೋಷಿಸಿದರು. ಹಂಪಿಯಲ್ಲಿ ಹಿಂದಿನಿಂದಲೂ ಪೂಜಿಸಲ್ಪಡುತ್ತಿದ್ದ ಭುವನೇಶ್ವರಿ ದೇವಿ ನಾಡದೇವತೆಯಾಗಿ ನೆಲೆಪಡೆದುಕೊಂಡಳು.
ಭುವನೇಶ್ವರಿ ದೇವಿಯನ್ನು ಜಪಿಸಿ ಮಾಧವರು (ವಿದ್ಯಾರಣ್ಯರ ಮೂಲ ಹೆಸರು) ತಪಸ್ಸು ಮಾಡಿದರು ಎಂಬ ಪ್ರತೀತಿ ಇದೆ. ಮಾಧವರು ಸನ್ಯಾಸತ್ವ ಸ್ವೀಕರಿಸಿ, ಹಂಪಿಗೆ ಮರಳಿ ಹಕ್ಕ-ಬುಕ್ಕರೊಡಗೂಡಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು ಎಂದು ಹೇಳುತ್ತಾರೆ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಪ್ರಧಾನ ಅರ್ಚಕರು.
ವಿಜಯನಗರ ಸಾಮ್ರಾಜ್ಯಕ್ಕಿಂತ ಪೂರ್ವದಲ್ಲೇ ಹಂಪಿಯಲ್ಲಿ ಭುವನೇಶ್ವರಿ ದೇವಿಯನ್ನು ಪೂಜಿಸಲಾಗುತ್ತಿತ್ತು. ದಶಮಹಾವಿದ್ಯೆಯಲ್ಲಿ ಭುವನೇಶ್ವರಿ ದೇವಿ ಬರುತ್ತಾಳೆ. ಹೀಗಾಗಿ ಪೌರಾಣಿಕ ಹಾಗೂ ಅಧ್ಯಾತ್ಮಿಕ ಹಿನ್ನೆಲೆಯನ್ನೂ ಭುವನೇಶ್ವರಿ ದೇವಿ ಹೊಂದಿದ್ದಾಳೆ. ರಾಜ್ಯೋತ್ಸವ ಸಂದರ್ಭದಲ್ಲಿ ಹಂಪಿಯಿಂದ ಜ್ಯೋತಿ ತೆಗೆದುಕೊಂಡು ಹೋಗುವ ಪರಂಪರೆಯನ್ನು ಈಗಲೂ ಪಾಲಿಸಲಾಗುತ್ತಿದೆ. ಬಂಗಾಳಿಗರು ಹಾಗೂ ಮರಾಠಿಗರ ಪ್ರಭಾವದಿಂದ ಕರ್ನಾಟಕದಲ್ಲೂ ನಾಡದೇವತೆಯ ಪರಿಕಲ್ಪನೆ ಹುಟ್ಟಿಕೊಂಡಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರ ಮಾತು.
ಇದನ್ನೂ ಓದಿ: Video: ಜಿ-20 ಪ್ರತಿನಿಧಿಗಳಿಂದ ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ವೀಕ್ಷಣೆ