ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದ ಅಪ್ರಾಪ್ತ ಬಾಲಕಿ ನಿಗೂಢ ಸಾವು ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಆಕೆಯ ಕುಟುಂಬಸ್ಥರಿಗೆ ಶೀಘ್ರ ಪರಿಹಾರ ವಿತರಿಸಬೇಕೆಂದು ಸಂಡೂರು ತಾಲೂಕು ಸಾಮೂಹಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಆಗ್ರಹಿಸಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ವಡ್ಡು ಗ್ರಾಮದ ನೂರಾರು ಮಂದಿ ಜಮಾಯಿಸಿ ಕೆಲ ಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬಾಲಕಿ ಸೆಪ್ಟೆಂಬರ್ 8ರಂದು ಸಂಜೆ ಹೊತ್ತಿಗೆ ಕಾಣೆಯಾಗಿದ್ದು, ಮಾರನೇ ದಿನವೇ ಗೋಣಿ ಚೀಲದಲ್ಲಿ ನಿಗೂಢವಾಗಿ ಆಕೆಯ ಶವ ಪತ್ತೆಯಾಗಿದೆ. ಚಾಕೋಲೇಟ್ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದೊಯ್ದು ಅಪರಿಚಿತ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದಾನೆ. ಆ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಜರುಗಿಸಬೇಕು. ಅಲ್ಲದೇ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅತ್ಯಾಚಾರ ಹಾಗೂ ಕೊಲೆಯಾದ ಬಾಲಕಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಿ ಭದ್ರತೆ ಒದಗಿಸಬೇಕು. ನೆರೆಹೊರೆಯ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿರುವ ವಲಸಿಗ ಕಾರ್ಮಿಕರಿಗೆ ಕಾನೂನು ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಕೈಗಾರಿಕಾ ವಲಯದ ಗ್ರಾಮಗಳಲ್ಲಿ ವಾಸವಾಗಿರುವ ವಲಸಿಗ ಕಾರ್ಮಿಕರ ಬಗ್ಗೆ ಸಮಗ್ರ ಮಾಹಿತಿ ಪಡೆದು ದಾಖಲೆಗಳನ್ನು ಶೇಖರಿಸಬೇಕು. ಜಿಲ್ಲಾಡಳಿತದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನಾಗರಿಕರಿಗೆ ರಕ್ಷಣೆಯ ಭರವಸೆ ನೀಡಬೇಕೆಂದು ವಿನಂತಿಸಿದ್ದಾರೆ.