ಬಳ್ಳಾರಿ : ಅಕ್ರಮವಾಗಿ ಗ್ಯಾಸ್ ತುಂಬುವಾಗ ಸಿಲಿಂಡರ್ ಸ್ಪೋಟಗೊಂಡ ಘಟನೆ ನಗರದ ಬೆಂಗಳೂರು ರಸ್ತೆಯ ಸಿ.ವೇಣುಗೋಪಾಲ್ ಎಂಬ ಕಟ್ಟಡದಲ್ಲಿ ನಡೆದಿದೆ.
ದಿನೋಪಯೋಗಿ ವಸ್ತುಗಳ ರಿಪೇರಿ ಕೆಲಸ ಮಾಡುವ ಅಂಗಡಿಯವರು ಅಕ್ರಮ ಮಾರಾಟಕ್ಕಾಗಿ ದೊಡ್ಡ ಎಲ್ಪಿಜಿ ಸಿಲಿಂಡರ್ನಿಂದ ಚಿಕ್ಕ ಸಿಲಿಂಡರ್ಗಳಿಗೆ ಗ್ಯಾಸ್ ತುಂಬುವಾಗ ಈ ದುರ್ಘಟನೆ ನಡೆದಿದ್ದು, ಪರಿಣಾಮ ಅಂಗಡಿ ಸುಟ್ಟು ಭಸ್ಮವಾಗಿದೆ. ಅಂಗಡಿಯವರು ಸಣ್ಣ ಎಲ್ಪಿಜಿ ಸಿಲಿಂಡರ್ಗಳನ್ನು 500 ರಿಂದ 600 ರೂ. ಹಾಗೂ ದೊಡ್ಡದು 1,500 ರೂ. ದರಕ್ಕೆ ಅಕ್ರಮ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಗೊತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿಂದೆಯೂ ಈ ಅಂಗಡಿಯಲ್ಲಿ ಸಣ್ಣ ಮಟ್ಟದ ಅಗ್ನಿ ದುರಂತ ನಡೆದಿತ್ತು. ಆದರೂ ಬುದ್ಧಿ ಕಲಿಯದ ಮಾಲೀಕರು ಅಕ್ರಮ ಚಟುವಟಿಕೆ ಮುಂದುವರೆಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಇನ್ಸ್ಪೆಕ್ಟರ್ ಬಸವರಾಜ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.