ಹೊಸಪೇಟೆ : ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ 1934 ಮಾರ್ಚ್ 5ರಂದು ಮಹಾತ್ಮ ಗಾಂಧೀಜಿಯವರು ನಗರಕ್ಕೆ ಭೇಟಿ ನೀಡಿದ್ದರು. ಈ ಕುರಿತು ಇತಿಹಾಸ ಪುಟಗಳಲ್ಲಿ ದಾಖಲೆಗಳಿವೆ.
ಬಳ್ಳಾರಿಯಿಂದ ಧಾರವಾಡ ಕಡೆ ತೆರಳುವಾಗ ಹೊಸಪೇಟೆಗೆ ಬಾಪು ಭೇಟಿ ನೀಡಿದ್ದರು. ಇಡೀ ಕರ್ನಾಟಕವನ್ನು ರೈಲಿನ ಮೂಲಕ ಸಂಚರಿಸಿ ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೇರೇಪಿಸುವ ಸಂಕಲ್ಪ ತೊಟ್ಟಿದ್ದ ಗಾಂಧೀಜಿಯವರು, ಹೊಸಪೇಟೆ ನಗರದ ಈಗಿನ ಶ್ರೀರಾಮುಲು ಉದ್ಯಾನವನ ಮತ್ತು ತೋಟಗಾರಿಕೆ ಇಲಾಖೆಯ ಮಧ್ಯೆ ಭಾಗದಲ್ಲಿ ಜನರನ್ನು ಉದ್ದೇಶಿಸಿ ಮೂರು ನಿಮಿಷಗಳ ಕಾಲ ಮಾತನಾಡಿದ್ದರು.
ಈ ಕುರಿತು ಮಾಹಿತಿ ನೀಡಿದ ಇತಿಹಾಸ ಪ್ರಾಧ್ಯಾಪಕ ಡಾ.ಹೆಚ್ ಎಂ ಚಂದ್ರಶೇಖರ್ ಶಾಸ್ತ್ರಿ, ಗಾಂಧೀಜಿಯವರನ್ನು ಹೊಸಪೇಟೆಗೆ ಕರೆ ತರುವಲ್ಲಿ ಬೆಲ್ಲದ ಚನ್ನಪ್ಪ, ಆರ್ ನಾಗನಗೌಡ ಪ್ರಮುಖ ಪಾತ್ರ ವಹಿಸಿದ್ದರು. ಜಸ್ಟೀಸ್ ಪಾರ್ಟಿಯ ಮುರಾರಿ ವೆಂಕಟಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ನಾಯಕರು ಚಳವಳಿಗಾಗಿ 3 ಸಾವಿರ ರೂ. ದೇಣಿಗೆ ನೀಡಿದ್ದರು. ಇಂದಿಗೆ ಹೊಸಪೇಟೆಗೆ ಮಹಾತ್ಮ ಭೇಟಿ ನೀಡಿ 86 ವರ್ಷ 6 ತಿಂಗಳು 2 ದಿನ ಆಯ್ತು ಎಂದು ತಿಳಿಸಿದ್ದಾರೆ.