ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರಿಗೆ ಕಿಡಿಗೇಡಿಗಳು ಕತ್ತಿ ತೋರಿಸಿ ಬೆದರಿಕೆ ಹಾಕಿದರೆನ್ನಲಾದ ಘಟನೆ ದೇವಿನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆರೋಪಿಗಳನ್ನು ಕೌಲ್ ಬಜಾರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಾಗೇಂದ್ರ ಅವರು ಆಪ್ತರೊಬ್ಬರ ಮನೆಗೆ ಹೋಗಿ ವಾಪಸ್ ಬರುವಾಗ ರಸ್ತೆ ಬದಿಯಲ್ಲಿದ್ದ ಇಬ್ಬರು ಕೈಯಲ್ಲಿದ್ದ ಕತ್ತಿ ಝಳಪಿಸಿದ್ದಾರೆ. ನಾಗೇಂದ್ರ ಕಾರ್‌ನೊಳಗೆ ಕುಳಿತಿದ್ದರಿಂದ ಯಾವುದೇ ತೊಂದರೆ ಆಗಿಲ್ಲ. ಆರೋಪಿಗಳ ಬಳಿ ಮಾರಕಾಸ್ತ್ರಗಳಿರುವುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಿಡಿದು ಥಳಿಸಿದ್ದಾರೆ.
ಸಿರುಗುಪ್ಪ ರಸ್ತೆಯ ರಿಮ್ಯಾಂಡ್ ಹೋಂ ಬಳಿಯ ನಿವಾಸಿಗಳಾದ ರಮೇಶ್ ಹಾಗೂ ವೆಂಕಟೇಶ್ ಬೆದರಿಕೆಯೊಡ್ಡಿದ ಆರೋಪಿಗಳು ಎಂದು ತಿಳಿದು ಬಂದಿದೆ. ಇವರನ್ನು ಕೌಲ್‌ಬಜಾರ್ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಕುರಿತು ಶಾಸಕರಾಗಲಿ ಅಥವಾ ಅವರ ಬೆಂಬಲಿಗರಾಗಲಿ ದೂರು ನೀಡಿಲ್ಲ. ಆದರೆ, ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಯಾರು?, ಯಾವ ಕಾರಣಕ್ಕೆ ಕತ್ತಿ ಹಿಡಿದಿದ್ದರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಅಂತಾ ಇನ್ಸ್ಪೆಕ್ಟರ್ ವಾಸು ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಹೊಸಪೇಟೆ ಬಿಜೆಪಿ ಅಭ್ಯರ್ಥಿ ಮೆರವಣಿಗೆಯಲ್ಲಿ ಬೆದರಿದ ಎತ್ತುಗಳು, ಹಲವರಿಗೆ ಗಾಯ