ಬಳ್ಳಾರಿ: ಕೇಂದ್ರದ ಕೃಷಿ ಕಾಯಿದೆಗಳನ್ನ ವಿರೋಧಿಸಿ ಗಣಿ ನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಕ್ರಾಸ್ ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಸಂಯುಕ್ತ ರೈತ ಸಂಘಟನೆ ಕರೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ತಡೆಗೆ ಗಣಿ ನಾಡು ಬಳ್ಳಾರಿ ಜಿಲ್ಲೆಯ ಮೂರ್ನಾಲ್ಕು ಕಡೆಗಳಲ್ಲಿ ನೂರಾರು ಮಂದಿ ರೈತರು ಜಮಾಯಿಸಿದರು. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಕಾಯಿದೆಯು ರೈತ ವಿರೋಧಿಯಾಗಿದ್ದು, ಕಾಯಿದೆ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನ ಕೆಲ ಹೊತ್ತು ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನ ಹಳ್ಳಿ ಕೊಟ್ಟೂರು ತಾಲೂಕಿನ ರೈತರು ಮರಿಯಮ್ಮನ ಹಳ್ಳಿ 114 ಡಣಾಪುರದ ಹತ್ತಿರ ರಾಷ್ಟೀಯ ಹೆದ್ದಾರಿ 13 ರಲ್ಲಿ ಕೆಲ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು. ಅಲ್ಲದೇ ಹೊಸಪೇಟೆ ತಾಲೂಕಿನ ರಾಜ್ಯ ಹೆದ್ದಾರಿ 25ರಲ್ಲಿ ಹಾಗೂ ಬಳ್ಳಾರಿ- ಕುರುಗೋಡು ತಾಲೂಕಿನ ಕೋಳೂರು ಕ್ರಾಸ್ ಬಳಿ (ಬೀದರ್- ಬೆಂಗಳೂರು) ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ರೈತ ಸಂಘದ ಮುಖಂಡ ಗೋಣಿ ಬಸಪ್ಪ, ಎಂ.ಎಲ್.ಕೆ. ನಾಯ್ಡು, ಸಂಗನಕಲ್ಲು, ಕೃಷ್ಣಪ್ಪ, ಗಂಗಾ ಧಾರವಾಡ್ಕರ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್, ಎಐಡಿಎಸ್ ಬೆಂಬಲ: ಕೃಷಿ ಕಾಯಿದೆ ವಿರೋಧಿಸಿ ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ರೈತ ಮುಖಂಡರು ಹಾಗೂ ಎಐಡಿಎಸ್ಒ ಸಂಘಟನೆಯ ಮುಖಂಡರೂ ಕೂಡ ಬೆಂಬಲ ಸೂಚಿಸಿದ್ದಾರೆ.