ಬಳ್ಳಾರಿ: ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು.
ಪ್ರಾಂತ ರೈತ ಸಂಘದ ಮುಖಂಡ ಆರ್.ಎಸ್.ಬಸವರಾಜ ನೇತೃತ್ವದಲ್ಲಿ ನೂರಾರು ರೈತರು, ಪದಾಧಿಕಾರಿಗಳು ಒಂದೆಡೆ ಜಮಾಯಿಸಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಜಿಂದಾಲ್ ಪರ ಇದ್ದುಕೊಂಡು ಕೋಟಿಗಟ್ಟಲೇ ಹಣ ಸಂಪಾದಿಸಿದ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಈಗ ದಿಢೀರ್ ಎಂದು ರೈತರ ಪರವಾಗಿ ನಿಂತುಕೊಂಡಂತೆ ನಟಿಸುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ರಾಜ್ಯ ಸರ್ಕಾರ ರಚನೆ ಮಾಡಿರುವ ಸಚಿವ ಸಂಪುಟದ ಉಪ ಸಮಿತಿಯು ಜಿಂದಾಲ್ ಉಕ್ಕು ಕಾರ್ಖಾನೆ ಹಾಗೂ ತೋರಣಗಲ್ಗೂ ಭೇಟಿ ನೀಡಿ, ಪರಿಶೀಲಿಸಿದ ನಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಾಂತ ರೈತ ಸಂಘದ ಮುಖಂಡರಾದ ಶಿವಶಂಕರ, ಎ.ಸ್ವಾಮಿ, ಯು.ತಿಪ್ಪೇಸ್ವಾಮಿ ಸೇರಿದಂತೆ ಹತ್ತಾರು ರೈತರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.