ಬಳ್ಳಾರಿ : ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿದೆ. ನಿನ್ನೆಯವರೆಗೂ ಶೇ.8ರಷ್ಟು ಬಿತ್ತನೆ ಕಾರ್ಯ ಚುರುಕಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಕಳೆದ ಬಾರಿ ಜೂನ್ ತಿಂಗಳಾಂತ್ಯಕ್ಕೆ ಅಂದಾಜು 183.2 ಮಿಲಿಮೀಟರ್‌ನಷ್ಟು ಮಳೆಯಾಗಬೇಕಿತ್ತಾದ್ರೂ ಕೂಡ ಸರಿಸುಮಾರು 104.0 ಮಿ.ಮಿ. ನಷ್ಟು ಮಳೆಯಾಗಿತ್ತು. ಅಂದ್ರೆ ಅಂದಾಜು 43.2 ಮಿಲಿಮೀಟರ್‌ನಷ್ಟು ಮಳೆ ಕಡಿಮೆಯಾಗಿದೆ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಪಶ್ಚಿಮ ತಾಲೂಕುಗಳೂ ಸೇರಿ ಜಿಲ್ಲೆಯ ನಾನಾ ಕಡೆಗಳಲ್ಲಿ ಬಿತ್ತನೆಕಾರ್ಯ ಚುರುಕಾಗಿದೆ. ಶೇಕಡ 8ರಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಆಗಿದೆ. ಈಗಾಗಲೇ ನಾನಾ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೊಲಗಳನ್ನ ಹದಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ.
ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿಯಲ್ಲಿ ಮಳೆಯಾಶ್ರಿತ ಭೂಮಿ. ಜೂನ್ ಮೊದಲ ವಾರದಿಂದಲೇ ಮುಂಗಾರು ಹಂಗಾಮಿನಲ್ಲಿ ನಾನಾ ಬೆಳೆಗಳನ್ನ ಬಿತ್ತನೆ ಮಾಡಲು ರೈತರು ಮುಂದಾಗಿರೋದು ಕಂಡು ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ್ ಆಚಾರ್ಯ, ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಜುಲೈ ತಿಂಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಅದು ಪ್ರತಿ ಬಾರಿ ಪುನರಾವರ್ತನೆ ಆಗುತ್ತದೆ. ಯಾಕೆಂದ್ರೆ, ಜೂನ್ ತಿಂಗಳಲ್ಲಿ ಬಿತ್ತನೆಕಾರ್ಯ ಹೆಚ್ಚಾಗೋದ್ರಿಂದ ಜುಲೈ ಮೊದಲ ಅಥವಾ 2ನೇ ವಾರದಲ್ಲಿ ಮಳೆ ಸುರಿಯಬೇಕು ಎಂದರು.
ಆದರೆ, ಅಗಸ್ಟ್ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚಲಿದೆ. ಇದರಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗದ ರೀತಿ ರೈತರಿದ್ದಾರೆ. ಅದು ಈಗ ಎದುರಾಗೋದಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಯಾಕೆಂದ್ರೆ, ಈ ಬಾರಿ ಶೇ.183.2 ಮಿ.ಮಿ. ನಷ್ಟು ಮಳೆಯ ಗುರಿಯಿತ್ತು. ಅದು ಈಗ ಅಂದಾಜು 176.4 ನಷ್ಟು ತಲುಪಿದೆ. ಕೇವಲ 3.7 ಮಿಲಿಮೀಟರ್‌ನಷ್ಟು ಮಳೆ ಬರಬೇಕಿದೆ ಅಷ್ಟೇ ಎಂದರು.
ಕೊರೊನಾ ಭಯ ಗ್ರಾಮೀಣರಿಗೆ ಇಲ್ಲ: ಈ ಮಹಾಮಾರಿ ಕೊರೊನಾ ಭಯ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತ. ಅದು ಗ್ರಾಮೀಣ ಭಾಗಕ್ಕಿಲ್ಲ. ಅಲ್ಲದೇ ಕಳೆದ ಮೂರು ವರ್ಷಗಳಿಂದಲೂ ಕೂಡ ಇಷ್ಟೊಂದು ಮಳೆ ಸುರಿದಿರಲಿಲ್ಲ. ಈ ಬಾರಿ ದಾಖಲೆಯ ಪ್ರಮಾಣದಷ್ಟು ಮಳೆ ಸುರಿದಿದೆ. ಹೀಗಾಗಿ ಜಿಲ್ಲೆಯ ರೈತಾಪಿ ವರ್ಗದವರೆಲ್ಲರೂ ಕೂಡ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ವಿವರಿಸಿದರು.