ಬಳ್ಳಾರಿ : ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಅಧಿಕಾರ ನಡೆಸಿ ಭ್ರಷ್ಟಾಚಾರ ನಡೆಸಿದವು. ಜೆಡಿಎಸ್ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್ಗೆ ಹೋಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಡೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಡೂರಿನ ಕುಮಾರಸ್ವಾಮಿ ಭಗವಾನ್ ವಿಠೋಬ, ಹನುಮಂತ ಹುಟ್ಟಿದ ನಾಡಿಗೆ ನಮನ ಸಲ್ಲಿಸುವೆ. ನಾನು ಬರಲು ಎರಡು ಗಂಟೆ ತಡವಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.
2018 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಸಿಕ್ಕಿತ್ತು. ಆದರೆ ಸಂಪೂರ್ಣ ಬಹುಮತ ಸಿಕ್ಕಿರಲಿಲ್ಲ. ಬಳಿಕ ಕಾಂಗ್ರೆಸ್ ಜೆಡಿಎಸ್ ಅಧಿಕಾರ ನಡೆಸಿ ಭ್ರಷ್ಟಾಚಾರ ನಡೆಸಿದರು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಎಫ್ ಐಯನ್ನು ಮೋದಿ ಬ್ಯಾನ್ ಮಾಡಿದರು. ನರೇಂದ್ರ ಮೋದಿ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕಿಸ್ತಾನ ಗರ್ವವನ್ನು ಮುರಿದರು. ಮೋದಿ ಸರ್ಕಾರ 130 ಕೋಟಿ ಜನರಿಗೆ ಕೊರೊನಾ ವ್ಯಾಕ್ಸಿನ್ ಉಚಿತವಾಗಿ ನೀಡಿತು. ಅಷ್ಟೇ ಅಲ್ಲದೆ, ಮೋದಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ಸಿದ್ದು-ಡಿಕೆಶಿ ವಿರುದ್ಧ ವಾಗ್ದಾಳಿ: ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರ ಅಮಿತ್ ಶಾ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ಶುರುವಾಗಿದೆ. ಇವರಿಂದ ಕರ್ನಾಟಕ ಕಲ್ಯಾಣ ಹೇಗೆ ಆಗುತ್ತದೆ ಎಂದು ಟೀಕಿಸಿದರು. ಆದರೆ ಬಿಜೆಪಿ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಡಿಎಂಎಫ್ ಹಾಗೂ ಮಿನಿರಲ್ ಫಂಡ್ ನಿಂದ ಅಭಿವೃದ್ಧಿ ಮಾಡಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು. ಇನ್ನು ಅಮಿತ್ ಶಾ ಅವರಿಗೆ ಬೆಳ್ಳಿಗದೆ ಹಾಗೂ ಕುಮಾರಸ್ವಾಮಿ ದೇವಸ್ಥಾನದ ಪೋಟೋ ನೀಡಿ ಗೌರವಿಸಲಾಯಿತು.
ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಹತ್ತು ಸ್ಥಾನಗಳಲ್ಲಿ ಗೆಲ್ಲಬೇಕು. ಆಗ ಮಾತ್ರ ಕೇಂದ್ರ ಗೃಹಸಚಿವ ಅಮಿತ್ ಶಾ ಬಂದಿದ್ದು ಸಾರ್ಥಕವಾಗುತ್ತದೆ ಎಂದರು. ನಾವು ಕರ್ನಾಟಕ ರಾಜ್ಯದುದ್ದಕ್ಕೂ ಪ್ರವಾಸ ಮಾಡುತ್ತೇವೆ. 140 ಸ್ಥಾನ ಗೆದ್ದು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಆದರೆ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದರು.
ಕೋರ್ ಕಮಿಟಿ ಸಭೆ: ಸಮಾವೇಶದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಲೀಲಾ ಪ್ಯಾಲೇಸ್ ಗೆ ತೆರಳಿದರು. ಇಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಪ್ರಮುಖರ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ನಾಲ್ಕು ಜಿಲ್ಲೆಗೆ ಸಂಬಂಧಿಸಿದ ಪ್ರಮುಖರನ್ನು ಕರೆದು ಪಕ್ಷದ ಸಂಘಟನೆ ಕುರಿತು ಅಮಿತ್ ಶಾ ಅವರು ಚರ್ಚೆ ಮಾಡಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು. ಪ್ರತಿ ಶಾಸಕರು ಒಂದು ಕ್ಲಸ್ಟರ್ ಮಾಡಿಕೊಂಡು ಓಡಾಡಬೇಕು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಕೆಲಸ ಮಾಡಬೇಕು. ಜಿಲ್ಲೆಗಳಲ್ಲಿ ಶಾಸಕರು, ಸಂಸದರು ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಇನ್ನು ಜನರನ್ನು ಬಿಜೆಪಿ ಕಡೆ ಕರೆ ತರಲು ಕೆಲಸ ಮಾಡಬೇಕು. ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಅರಳಬೇಕು. 10 ಬಾರಿ ಕಾಂಗ್ರೆಸ್ ಗೆದ್ದಿರುವ ಈ ಕ್ಷೇತ್ರದಲ್ಲಿ ಕಮಲ ಅರಳಿಸುತ್ತೇವೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧಿಸಬೇಕೆಂದಿರುವೆ. ಈ ಬಗ್ಗೆ ಪಕ್ಷ ಏನು ನಿರ್ಧಾರ ಮಾಡುತ್ತದೋ ಅದಕ್ಕೆ ಬದ್ಧನಾಗಿದ್ದೇನೆ. ಸಂಡೂರಿನಲ್ಲಿ ನಾನು ಸ್ಪರ್ಧಿಸುವ ಕುರಿತು ಹಾಗೂ ಅಭ್ಯರ್ಥಿ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿಲ್ಲ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ : ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು: ವಿಧಾನಸಭೆಯಲ್ಲಿ ನಡೆಯಿತು ಬಿಸಿ ಬಿಸಿ ಚರ್ಚೆ