ಹೊಸಪೇಟೆ: ಕೊರೊನಾ ಸಂಕಷ್ಟ ಕಾಲದಲ್ಲಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದಕ್ಕೆ ಆರ್ಥಿಕ ತಜ್ಞರಿಂದ ಅಸಮಾಧಾನ ಹಾಗೂ ವಿರೋಧ ಕೇಳಿ ಬಂದಿದೆ.
ಕೊರೊನಾದಿಂದ ಬಳ್ಳಾರಿ ಜಿಲ್ಲೆಯಲ್ಲಿ 581 ಜನರು ಮೃತಪಟ್ಟಿದ್ದಾರೆ. ಇನ್ನು 250 ಜನರ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಅದರ ಹೊರತಾಗಿ ರಾಜಕೀಯ ಒತ್ತಡಕ್ಕೆ ಮಣಿದು ಹೊಸ ಜಿಲ್ಲೆಯನ್ನು ಘೋಷಣೆ ಮಾಡಿರುವುದು ದುರದೃಷ್ಟಕರ ಸಂಗತಿ ಎಂಬ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ.
ನೂತನ ಜಿಲ್ಲೆ ಬೇಕಿತ್ತಾ?: ವಿಜಯನಗರ ಜಿಲ್ಲೆ ಘೋಷಿಸಲು ಇದು ಸಕಾಲವಲ್ಲ. ಇಲ್ಲಿ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಜಿಲ್ಲೆ ಘೋಷಣೆ ಮಾಡಿರುವುದು ರಾಜಕೀಯಕ್ಕೆ ಅನುಕೂಲವಾಗಿರಬಹುದು. ಆದರೆ, ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ತಪ್ಪು ನಿರ್ಧಾರವಾಗಿದೆ. ಮುಂದೆ ಎಂದಾದರು ಜಿಲ್ಲೆ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು.
ಅಲ್ಪಾವಧಿಗೆ ನಿರ್ಧಾರ: ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದು ಅಲ್ಪಾವಧಿ ನಿರ್ಧಾರವಾಗಿದೆ. ಇದೊಂದು ದೀರ್ಘಾವಧಿಯ ಅನಕೂಲವಾಗಿಲ್ಲ. ರಾಜ್ಯದಲ್ಲಿ ಬೆಳಗಾವಿ ಹಾಗೂ ತುಮಕೂರು ದೊಡ್ಡ ಜಿಲ್ಲೆಗಳಾಗಿವೆ. ಅಲ್ಲಿ ಯಾಕೆ ಜಿಲ್ಲೆಗಳನ್ನು ವಿಂಗಡನೆ ಮಾಡುತ್ತಿಲ್ಲ. ಬಳ್ಳಾರಿ ಜಿಲ್ಲೆಯನ್ನು ಮಾತ್ರ ವಿಂಗಡನೆ ಮಾಡಲಾಗುತ್ತಿದೆ. ಇದೊಂದು ರಾಜಕೀಯ ಉದ್ದೇಶವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
ಸಾವಿರಾರು ಕೋಟಿ ಹಣ ಹೂಡಿಕೆ: ಜಿಲ್ಲೆಗೆ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಮಾಡಬೇಕಾಗುತ್ತದೆ. ಹೊಸಪೇಟೆಯಲ್ಲಿ 32 ಇಲಾಖೆಗಳನ್ನ ತೆರೆಯಬೇಕಾಗುತ್ತದೆ. ಅಲ್ಲದೇ, 500 ಹೆಚ್ಚು ಮಾನವ ಸಂಪನ್ಮೂಲ ಬೇಕಾಗುತ್ತದೆ. ಅವರು ಹಿರಿಯ ಅಧಿಕಾರಿಗಳಾಗಿರುತ್ತಾರೆ. ಅವರಿಗೆ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಅಲ್ಲದೇ, ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ಸಾವಿರಾರು ಕೋಟಿ ರೂ. ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅದು ಕಷ್ಟಕರವಾಗಿದೆ.
ಬಜೆಟ್ ಘೋಷಣೆ ಮಾಡಲಿ: ಜಿಲ್ಲೆ ಘೋಷಣೆ ಮಾಡಿದ್ರೆ ಸಾಲದು, ಅದಕ್ಕೆ ಬಜೆಟ್ ಮೀಸಲಾಗಿಡಬೇಕು. ಈ ಹಣವನ್ನು ಸರಕಾರ ಎಲ್ಲಿಂದ ಜೋಡಿಸುತ್ತದೆ ಎಂಬುದು ಇಲ್ಲಿವರೆಗೂ ಬಹಿರಂಗಪಡಿಸಿಲ್ಲ. ಕೇವಲ ವಿಜಯನಗರ ಜಿಲ್ಲೆ ಎಂದು ಘೋಷಣೆ ಮಾಡಲು ಮುಂದಾಗಿದೆ. ಇದೊಂದು ಅವೈಜ್ಞಾನಿಕ ನೀತಿಯಾಗಿದೆ.
ಜಿಲ್ಲೆ ಪಂಚಾಯಿತಿ ವಿಂಗಡನೆ: ಬಳ್ಳಾರಿಯಿಂದ ಜಿಲ್ಲಾ ಪಂಚಾಯಿತಿ ವಿಂಗಡನೆ ಮಾಡಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಇದು ಕಷ್ಟಕರವಾಗಿದೆ.
ಕೊರೊನಾ ಎರಡನೇ ಅಲೆ: ಕೊರೊನಾ ಎರಡನೇ ಅಲೆ ಪ್ರಾರಂಭವಾಗುತ್ತದೆ ಎಂದು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಯಾಕೆಂದರೆ ಚಳಿಗಾಲ ಆರಂಭವಾಗಿದೆ. ಇದನ್ನು ನಿಭಾಯಿಸೋದು ಅಷ್ಟೊಂದು ಸುಲಭವಲ್ಲ. ಅಲ್ಲದೇ, ರಾಜ್ಯದಲ್ಲಿ ಬಳ್ಳಾರಿಯಲ್ಲಿ ಶೇ.42 ರಷ್ಟು ಕೊರೊನಾ ಕಾಣಿಸಿಕೊಂಡಿದೆ ಎಂದು ಸರಕಾರ ತಿಳಿಸಿತ್ತು. ರಾಜ್ಯದಲ್ಲಿ ಕೊರೊನಾ ವಿಷಯದಲ್ಲಿ ಬಳ್ಳಾರಿ ನಂ.1 ಸ್ಥಾನದಲ್ಲಿದೆ.