ಬೆಂಗಳೂರು: ಬಳ್ಳಾರಿ ಜಿಲ್ಲೆ ಉಸ್ತುವಾರಿ ಹೊಣೆ ಹೊತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಬಳ್ಳಾರಿ ಜಿಲ್ಲೆ ಸಲಹಾ ಸಮಿತಿ ಸಭೆ ನಡೆಯಿತು.
ವಿಕಾಸಸೌಧದಲ್ಲಿ ಸಂಜೆ ನಡೆದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ, ವಿಧಾನಸಭೆ ಕ್ಷೇತ್ರವಾರು ಪ್ರಗತಿಗೆ ಆಗಬೇಕಿರುವ ಯೋಜನೆಗಳ ಅನುಷ್ಠಾನ, ಜಾರಿ, ಪ್ರಗತಿಯ ವಿಚಾರವಾಗಿ ಪರಿಶೀಲನೆ ನಡೆಸಿದರು.ಸಭೆಯಲ್ಲಿ ಹಾಜರಿದ್ದ ವಿವಿಧ ಮುಖಂಡರು ಅಲ್ಲಿನ ವಿಚಾರಗಳ ಕುರಿತು ಮಾಹಿತಿ ಒದಗಿಸಿದರು. ಯಾವ್ಯಾವ ರೀತಿಯ ಕಾಮಗಾರಿಗಳು ನಡೆಯಬೇಕು, ಈ ಭಾಗದ ಅಭಿವೃದ್ಧಿಗೆ ಸಿಗಬೇಕಾದ ಅನುದಾನ, ಕೊಡುಗೆಗಳ ಕುರಿತು ಮನವಿ ಸಲ್ಲಿಸಿದರು. ತುರ್ತಾಗಿ ಆಗಲೇಬೇಕಾದ ಕಾಮಗಾರಿಗಳು, ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ ನೀಡಿದ ಕೊಡುಗೆಗಳು ಹಾಗೂ ಘೋಷಣೆಗಳ ಈಡೇರಿಕೆ ಸಂಬಂಧ ಗಮನ ಸೆಳೆದರು.
ಸಚಿವರಾದ ತುಕಾರಾಂ, ಮುಖಂಡರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸಣ್ಣಪಕೀರಪ್ಪ, ಎನ್. ವೈ. ಗೋಪಾಲಕೃಷ್ಣ, ಶಾಸಕರಾದ ಸೋಮಶೇಖರ್ ರೆಡ್ಡಿ ಹಾಗು ಬಳ್ಳಾರಿ ಜಿಲ್ಲೆಯ ಶಾಸಕರು, ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.