ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರನ್ನ ಪರ್ಮನೆಂಟ್ ಆಗಿ ಅನರ್ಹ ಮಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿ ಹೇಳಿದರು.
ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾದಿಗನೂರು ಗ್ರಾಮದಲ್ಲಿಂದು ರೋಡ್ ಶೋನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗಾಗಲೇ ಅನರ್ಹ ಶಾಸಕರಾಗಿದ್ದು, ಅವರನ್ನು ಪರ್ಮನೆಂಟ್ ಆಗಿ ಅನರ್ಹ ಮಾಡಿಬಿಡಿ. ಆನಂದ್ ಸಿಂಗ್ ಜನತೆ ಕೇಳಿ ರಾಜೀನಾಮೆ ಕೊಟ್ಟಿಲ್ಲ. ಬಿಜೆಪಿಗೆ ಮಾರಾಟವಾಗಿದ್ದಾರೆ. ಶಾಸಕರಾಗಲು ಆನಂದ್ ಸಿಂಗ್ ಯೋಗ್ಯರಲ್ಲ. ಪಕ್ಷಾಂತರ ಮಾಡಿ, ಕಾಂಗ್ರೆಸ್ಗೆ ದ್ರೋಹ ಮಾಡಿದ್ದಾರೆ. ಹಾಗಾಗಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಅನರ್ಹ ಮಾಡಿದ್ದಾರೆ.
ವಿಜಯನಗರ ಕ್ಷೇತ್ರದ ಅಭಿವೃದ್ಧಿಗೆ ಆನಂದ್ ಸಿಂಗ್ ಅವರು ಏನು ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಭಾಷಣ ಮಾಡುತ್ತಿದ್ದಾರೆ. ವೆಂಕಟರಾವ್ ಘೋರ್ಪಡೆ ಪ್ರಾಮಾಣಿಕರು. ಹಗಲು, ಇರಳು ದುಡಿಯುತ್ತಾರೆ. ಆದರೆ, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ವೆಂಕಟರಾವ್ ಘೋರ್ಪಡೆಗೆ ಮತ ಹಾಕಿ, ಅದು ನನಗೆ ಮತ ಹಾಕಿದಂತೆ ಎಂದು ಹೇಳಿದರು.
ಹೇ ಅಲ್ಲೇ ನಿಲ್ಲಪ್ಪ: ಅಲ್ಲೀಪುರಕ್ಕೆ ಮದುವೆ ಹೊರಟಿದ್ದವರು ಮದುವೆಗೆ ವರನನ್ನು ಕರೆದುಕೊಂಡು ಹೋಗಬೇಕು. ಟ್ರಾಫಿಕ್ ಜಾಮ್ನಿಂದ ತೊಂದರೆಯಾಗುತ್ತಿದೆ ಎಂದಾಗ ಸಿದ್ದರಾಮಯ್ಯ, ಹೇ ಅಲ್ಲೇ ನಿಲ್ಲಪ್ಪ ಎಂದು ಹೇಳಿ ಭಾಷಣ ಮುಂದುವರೆಸಿದರು.